

ಶೃಂಗೇರಿ: ಕಷ್ಟಪಟ್ಟು ದುಡಿಯುವ ಶ್ರಮಿಕ ವರ್ಗದವರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ವರ್ಗದ ಜನರಿಗೆ ಅನಾರೋಗ್ಯ ಹಾಗೂ ಅವಘಡದ ತೊಂದರೆಗಳಿಗೆ ಶಾರದಾಂಬ ಶ್ರಮಿಕ ಸೇವಾ ಟ್ರಸ್ಟ್ ಮಾಡುವ ಸಹಕಾರ ಮಾನವೀಯ ಮೌಲ್ಯದ ಶ್ರೇಷ್ಠತೆ ಎತ್ತಿಹಿಡಿಯುತ್ತಿದೆ ಎಂದು ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು.
ಸೋಮವಾರ ತಾಪಂನಲ್ಲಿ ಶ್ರೀ ಶಾರದಾಂಬ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದಿಂದ ನಡೆದ ಸರ್ವಸದಸ್ಯರ ಮಾಸಿಕ ಸಭೆಯಲ್ಲಿ ಮಾತನಾಡಿದರು. ಶ್ರಮಿಕರು ದುಡಿದ ಹಣವನ್ನು ಕೌಟುಂಬಿಕ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಬೇಕು ಎಂದರು. ಸಂಘದ ಐದು ಜನರಿಗೆ ಟ್ರಸ್ಟ್‌ನಿಂದ ಸಹಾಯಧನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಮುನಿಸ್ವಾಮಿ, ಉದ್ಯಮಿ ನಾಗರಾಜ್ ಬೇಗಾರು, ಟ್ರಸ್ಟ್ ಅಧ್ಯಕ್ಷ ಚಂದ್ರನಾಯ್ಕ, ಕಾರ್ಯದರ್ಶಿ ಶಿವರಾಮ್, ಪದಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಇದ್ದರು.