ಹಣ ಕಿತ್ತುಕೊಂಡು ಪರಾರಿಯಾದ ಅಪರಿಚಿತರು

Strangers fled after taking money
ತಾಳಿಕೋಟೆಯ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‌ನ ವ್ಯವಸ್ಥಾಪಕನಿಂದ ಹಣ ಕಿತ್ತುಕೊಂಡು ಹೋದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Published on

ತಾಳಿಕೋಟೆ: ಪೆಟ್ರೋಲ್ ಪಂಪ್‌ನಲ್ಲಿ ಜಮೆಯಾದ ಹಣ ಬ್ಯಾಂಕ್‌ಗೆ ಕಟ್ಟಲು ಹೊರಟಿದ್ದ ವ್ಯಕ್ತಿಯ ಮೈಮೇಲೆ ಬೈಕ್ ಹಾಯಿಸುವಂತೆ ಡ್ರಾಮಾ ಮಾಡಿ ಹಣವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ಸಂಭವಿಸಿದೆ.

ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‌ನಲ್ಲಿ ಆ. 4ರ ರಾತ್ರಿ 10ರಿಂದ ಆ. 5ರ ಮಧ್ಯಾಹ್ನ 12 ಗಂಟೆಯವರೆಗೆ ಜಮೆಯಾಗಿದ್ದ 1,31,300 ರೂ.ಗಳನ್ನು ಬಂಕ್‌ನ ವ್ಯವಸ್ಥಾಪಕ ಮಹ್ಮದರಫೀಕ್ ಖಾದರಸಾ ಲಾಹೋರಿ ಎಂಬವವರು ಆ. 5ರಂದು ಮಧ್ಯಾಹ್ನ 1ರ ಸುಮಾರು ಬ್ಯಾಂಕ್‌ಗೆ ಕಟ್ಟಲು ಎಕ್ಸಲ್ ಮೋಟರ್ ಬೈಕ್‌ನಲ್ಲಿ ಹೋಗುತ್ತಿದ್ದರು. ಖಾಸ್ಗತೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಹೀರೋ ಹೊಂಡಾ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತ ಖದೀಮರು ಬೈಕ್‌ಗೆ ಡಿಕ್ಕಿ ಹೊಡೆಸುವಂತೆ ಮಾಡಿ ಬೈಕ್ ನಿಲ್ಲಿಸಿ ಲಾಹೋರಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಅದರಲ್ಲಿ ಒಬ್ಬ ಬೈಕ್‌ನಲ್ಲಿದ್ದ ಹಣವನ್ನು ಕಿತ್ತುಕೊಂಡು ವಿಜಯಪುರ ರಸ್ತೆ ಕಡೆಗೆ ಪರಾರಿಯಾಗಿದ್ದಾನೆ. ಈ ಕುರಿತು ಮಹ್ಮದರಫೀಕ್ ಲಾಹೋರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಣ ದೋಚಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಬಂಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net