ಹಣ, ಅಧಿಕಾರದಿಂದ ಸತ್ಯ ಮರೆಮಾಚುವ ಯತ್ನ

14 NMG 01 (4)
Published on

ನಾಗಮಂಗಲ: ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಹಾಗೂ ಜಿಲ್ಲೆಯ 7 ಕೃಷಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆಂಬ ಪ್ರಕರಣಗಳಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ನೈಜ ಆಪಾದಿತರು. ಆದರೆ ಅಧಿಕಾರ ಮತ್ತು ಹಣದಿಂದ ಸತ್ಯವನ್ನು ಕೊಂಡುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು.

ಪಟ್ಟಣದ ಗೃಹ ಕಚೇರಿಯಲ್ಲಿ ಭಾನುವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡದಿದ್ದರೆ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ಆದರೆ ಈ ಪ್ರಕರಣದಿಂದ ಹಣಕ್ಕಾಗಿ ಕೆಲವು ಜನ ಏನು ಬೇಕಾದರೂ ಮಾಡುತ್ತಾರೆ ಎಂಬ ಪಾಠ ಕಲಿತಂತಾಯ್ತು ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲೆಯ 7 ಕೃಷಿ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂಬ ಪ್ರಕರಣದಲ್ಲೂ ಸತ್ಯವನ್ನು ಮರೆಮಾಚಲಾಗುತ್ತಿದೆ. ವಿಚಾರಣೆ ಆರಂಭಕ್ಕೆ ಮುನ್ನವೇ ಇದು ನಕಲಿ ಪತ್ರವೆಂದು ಸಚಿವ ಚಲುವರಾಯಸ್ವಾಮಿಯೇ ತೀರ್ಪು ನೀಡುವ ಮೂಲಕ ಸತ್ಯವನ್ನು ಮರೆಮಾಚಿದರು ಎಂದು ಆರೋಪಿಸಿದರು.
ನನ್ನ ಅಧಿಕಾರಾವಧಿಯಲ್ಲಿ ತಂದ ಕೆಲಸಗಳನ್ನು ನಿಲ್ಲಿಸುವುದು ಸಚಿವರ ದೊಡ್ಡ ಸಾಧನೆಯಾಗಿದೆ. ಗುತ್ತಿಗೆದಾರರು ಕೆಲಸ ಆರಂಭಿಸಬೇಕು ಎಂದರೆ ಸಚಿವರನ್ನು ಬೆಂಗಳೂರಿನ ಕಾಫಿ ಡೇಗೆ ಹೋಗಿ ಭೇಟಿಯಾಗಬೇಕು. ಅಲ್ಲಿ ನನ್ನ ಅವಧಿಯ ಕಾಮಗಾರಿಗಳಿಗೆ ಶೇ.5 ಕಮಿಷನ್ ಪಡೆದು ಆನಂತರ ಕಾಮಗಾರಿ ನಡೆಸಲು ಅನುಮತಿ ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಚಲುವರಾಯಸ್ವಾಮಿ ಯಾರು ಎಂಬುದನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಜೆಡಿಎಸ್‌ಗೆ ಸಲ್ಲುತ್ತದೆ. ಅವರ ಬೆಳವಣಿಗೆಗೆ ಕಾರಣೀಭೂತರಾಗಿರುವ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೇ ಅವಾಚ್ಯ ಶಬ್ದಗಳಲ್ಲಿ ಟೀಕಿಸುವ ಮಟ್ಟಕ್ಕೆ ಹೋಗಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚಲುವರಾಯಸ್ವಾಮಿ ಹಣೆಬರಹ ಚೆನ್ನಾಗಿದೆ. ಗೆದ್ದಾಗೆಲ್ಲ ಸಚಿವರಾಗಿ ಹಣ ಮಾಡುತ್ತಿದ್ದಾರೆ. ನಾನು ಗೆದ್ದಾಗೆಲ್ಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿದ್ದೇನೆ. ಮಾಟ, ಮಂತ್ರ, ವಾಮಾಚಾರ ಮಾಡಿಸುವುದರಲ್ಲಿ ಚಲುವರಾಯಸ್ವಾಮಿ ನಿಪುಣ. ಆದರೆ ಜನತೆ ಅವರ ದರ್ಪ, ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಏಕವಚನದಲ್ಲೇ ಟೀಕಾ ಪ್ರಹಾರ ನಡೆಸಿದರು.

ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವ ಚಲುವರಾಯಸ್ವಾಮಿ ಹಾಗೂ ಅವರ ಪಟಾಲಂ ವಿರುದ್ಧ ಆ.18 ರಂದು ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆಬಾಲು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮನ್‌ಮುಲ್ ನಿರ್ದೇಶಕ ಕೋಟಿರವಿ, ಪುರಸಭೆ ಸದಸ್ಯ ಶಂಕರಲಿಂಗೇಗೌಡ, ಜಿ.ಪಂ.ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ಕಂಚಿನಕೋಟೆಮೂರ್ತಿ,ಯದುರಾಜು, ಮೈತ್ರಿಕೃಷ್ಣೇಗೌಡ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net