ಹಡ್ಳುಬೈಲುನಲ್ಲಿ ಮನೆ ತೆರವು ವಿರೋಧಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ

rpt WEB
Published on

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಹಡ್ಳುಬೈಲುನಲ್ಲಿ ಕೂಲಿ ಕಾರ್ಮಿಕರಾದ ಜ್ಯೋತಿ ರಾಮಪ್ಪ ಅವರ ಮನೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಮಂಗಳವಾರ ಸಂತ್ರಸ್ತ ಕುಟುಂಬವಿರುವ ಸ್ಥಳದಿಂದ ಹುಂಚ ನಾಡಕಚೇರಿವರೆಗೆ 8 ಕಿ.ಮೀ. ಪಾದಯಾತ್ರೆ ನಡೆಸಿದರು.

ಬಡವರಿಗೆ ಬದುಕು ಕಟ್ಟಿಕೊಳ್ಳಲು ಮನೆ ನಿರ್ಮಾಣದ ಯೋಜನೆ ರೂಪಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಕೂಲಿಕಾರ್ಮಿಕರು ಕಟ್ಟಿದ ಮನೆಯನ್ನು ಕಿತ್ತು ಹಾಕಿ ಬೀದಿಗೆ ತಳ್ಳಿರುವುದು ಬಿಜೆಪಿ ಸಂಸ್ಕೃತಿ ಎಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಸಂತ್ರಸ್ತರು ಕೆಲವು ವರ್ಷಗಳಿಂದ ಹೊನ್ನೆಬೈಲು ಗ್ರಾಮದ ಸರ್ವೇ ನಂ. 101ರಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವನ್ನೂ ಪಡೆದಿದ್ದಾರೆ. ತಮ್ಮ ಸ್ವತ್ತಿನ ರಕ್ಷಣೆಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಿದ್ದಾಗ ಬಡವನ ಮನೆ ತೆರವುಗೊಳಿಸಿದ್ದೇಕೆ? ಇಂತಹ ದರ್ಪದ ಅಧಿಕಾರದ ವಿರುದ್ಧ ನಿರಂತರ ಹೋರಾಡುತ್ತೇವೆ. ನಿಮ್ಮ ಆಡಳಿತ ಏಕಪಕ್ಷೀಯವಾಗಿದೆ. ಬಿಜೆಪಿಯವರು ಏನೇ ತಪ್ಪು ಮಾಡಿದರೂ ಮಾಫಿಯಿದೆ. ಇತರರು ಸತ್ಯವನ್ನು ಬಾಯ್ಬಿಟ್ಟರೆ ಪೊಲೀಸ್ ಇಲಾಖೆ ಮೂಲಕ ಪ್ರಕರಣ ದಾಖಲಿಸುವ ಸಂವಿಧಾನ ವಿರೋಧಿ ನಿಲುವು ನಿಮ್ಮದು ಎಂದು ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದ ಸಹಿತ ಕ್ಷೇತ್ರದ ಬಡಜನರ ಪರವಾಗಿ ಎಂದೆಂದಿಗೂ ಕಾಂಗ್ರೆಸ್ ಪಕ್ಷವಿದೆ. ಕಾನೂನಾತ್ಮಕ ರಕ್ಷಣೆ ನೀಡುತ್ತೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net