ಹಡಪದರ ವಿಚಾರಧಾರೆ ಮೈಗೂಡಿಸಿಕೊಳ್ಳಿ: ಜಿ.ಟಿ.ದೇವೇಗೌಡ

14
Published on

ಮೈಸೂರು: ವಚನಕಾರ ಹಡಪದ ಅಪ್ಪಣ್ಣ ಅವರ ವಿಚಾರಧಾರೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಡಪದ ಅಪ್ಪಣ್ಣ ಜಯಂತಿ ಸಮಿತಿ ಸಹಯೋಗದೊಂದಿಗೆ ನಗರದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಪಣ್ಣ ಅವರ ವಚನಗಳು ಬಸವಣ್ಣ ಅವರ ಮೇಲಿನ ಗೌರವ, ಭಕ್ತಿಯನ್ನು ವ್ಯಕ್ತಪಡಿಸುತ್ತವೆ. 12ನೇ ಶತಮಾನದಲ್ಲಿಯೇ ಬಸವಣ್ಣಅವರು ಅಪ್ಪಣ್ಣ ಅವರನ್ನು ನಿಜಸುಖಿ ಎಂದು ಕರೆಯುತ್ತಿದ್ದರು. ಅಪ್ಪಣ್ಣ ಲಿಂಗವನ್ನು ಕೈಯಲ್ಲಿ ಇಟ್ಟುಕೊಂಡು ನೋಡಿ ಅದರಲ್ಲಿಯೇ ತಲ್ಲೀನರಾಗುತ್ತಿದ್ದರು. ಇವರು ವಚನಗಳ ಮುಖಾಂತರ ಮಾತ್ರ ಬದಲಾವಣೆಗೆ ಪ್ರಯತ್ನಿಸಿದರು ಎಂದರು.

ಶರಣು ವಿಶ್ವ ವಚನ ಫೌಂಡೇಶನ್ ಅಧ್ಯಕ್ಷ ಡಾ.ವಚನ ಕುಮಾರಸ್ವಾಮಿ ಮಾತನಾಡಿ, ಅಪ್ಪಣ್ಣ ಅವರ ಮೂಲ ಹೆಸರು ಜೀವಣ್ಣ. ಇವರ ಜನ್ಮಸ್ಥಳ ವಾಸಬಿನಾಳ. ಇವರು ತಮ್ಮ ಜಮೀನಿನಲ್ಲಿಯೇ ಇದ್ದಂತಹ ಒಂದು ಜಂಬೆ ಮರದ ಕೆಳಗೆ ಶಿವಭಕ್ತಿಯಲ್ಲಿ ತಲ್ಲಿನರಾಗಿರುತ್ತಿದ್ದರು. ಇದರಿಂದ ಭಯಗೊಂಡ ಅವರ ತಂದೆ ಅವರಿಗೆ ಬಾಲ್ಯದಲ್ಲೇ ವಿವಾಹ ಮಾಡಿದರು. ಬಳಿಕ ಅವರೊಂದಿಗೆ ಅವರ ಪತ್ನಿ ಕೂಡ ಶಿವದೀಕ್ಷೆ ಪಡೆದುಕೊಂಡರು ಎಂದು ತಿಳಿಸಿದರು.

ಹಡಪದ ಅಪ್ಪಣ್ಣ ಅವರ ತನು-ಮನ ಎಲ್ಲವನ್ನೂ ಬಸವಣ್ಣ ಅವರಿಗೆ ಅರ್ಪಣೆ ಮಾಡುತ್ತಾರೆ. ನಂತರ ಬಸವಣ್ಣ, ಹಡಪದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಳ್ಳುತ್ತಾರೆ. ಇವರ 354 ವಚನಗಳು ದೊರೆತಿವೆ. ಹಡಪದ ಅಪ್ಪಣ್ಣ ಬೇರೆಯಲ್ಲ, ಸಂಗಮೇಶ್ವರ ಅಪ್ಪಣ್ಣ ಬೇರೆಯಲ್ಲ. ಇಬ್ಬರೂ ಒಂದೇ ಎಂದು ಸ್ಪಷ್ಟಪಡಿಸಿದರು.
ಕೊಂಚೂರು ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ, ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್. ನಾಗೇಶ್, ಸದಸ್ಯರಾದ ಹರೀಶ್ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net