

ಹನೂರು: ಸಮಾಜದ ಏಳಿಗೆಗೆ ಶ್ರಮಿಸಿದ ಹಡಪದ ಅಪ್ಪಣ್ಣ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಆವರಣದಲ್ಲಿ ಶನಿವಾರ ತಾಲೂಕು ಸವಿತಾ ಸಮಾಜ ಸಂಘದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಅವರ 889ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶಿವಶರಣ ಹಡಪದ ಹಪ್ಪಣ್ಣ 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದು, ಬಸವಣ್ಣನವರ ಆಪ್ತ ಸಹಾಯಕರಾಗಿದ್ದರು. ಅನುಭವ ಮಂಟಪದ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜತೆಗೆ 251 ವಚನಗಳನ್ನು ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಶರಣರಿಗಿರಬೇಕಾದ ಕಾಯಕನಿಷ್ಠೆ, ಭಕ್ತಿ, ಆಚಾರ-ವಿಚಾರಗಳನ್ನು ವಚನಗಳಲ್ಲಿ ಸಾಹಿತ್ಯೀಕರಿಸಿದ್ದು, ಸಮಾಜದಲ್ಲಿದ್ದ ಮೌಢ್ಯತೆ ಹೊಗಲಾಡಿಸಲು ಪಣ ತೊಟ್ಟಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಕಾಯಕನಿಷ್ಠೆ ಮೆರೆಯಬೇಕು ಎಂದು ತಿಳಿಸಿದರು.
ಮುಖ್ಯ ಭಾಷಣಕಾರ ಸಾಹಿತಿ ಇದ್ವಾಂಡಿ ಶಿವಣ್ಣ ಮಾತನಾಡಿ, 12ನೇ ಶತಮಾನ ಶಿವಶರಣರು, ವಚನಸಾಹಿತ್ಯ ಹಾಗೂ ಭಕ್ತಿಭಾವದ ಯುಗ. ಹಾಗಾಗಿ ಈ ಕಾಲ ಘಟ್ಟದಲ್ಲಿನ ವಚನಗಳಲ್ಲಿ ಆಧ್ಯಾತ್ಮಿಕತೆಯನ್ನು ಕಾಣುತ್ತೇವೆ. ಗುರುವಿನ ಶ್ರೇಷ್ಠತೆ, ಕಾಯಕನಿಷ್ಠೆ ಹಾಗೂ ಶ್ರದ್ಧಾಭಕ್ತಿ ವಚನಗಳಲ್ಲಿ ರೂಪಿತಗೊಂಡಿದೆ. ಈ ದಿಸೆಯಲ್ಲಿ ಹಡಪದ ಅಪ್ಪಣ್ಣ ಅವರ ವಚನಗಳು ಶ್ರೇಷ್ಠತೆ ಹೊಂದಿದ್ದು, ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಆರ್.ಮಂಜುನಾಥ್ ಪ್ರೋತ್ಸಾಹಧನ ವಿತರಿಸಿದರು.
ಪ.ಪಂ.ಸದಸ್ಯರಾದ ಮಹೇಶ್, ಆನಂದ್, ಮಹೇಶ್‌ನಾಯ್ಕ, ಮಮ್ತಾಜ್‌ಬಾನು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪ್ರಭಾರ ತಹಸೀಲ್ದಾರ್ ಧನಂಜಯ, ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಪಾಂಡು, ತಾಲೂಕು ಅಧ್ಯಕ್ಷ ಹನೂರಿನ ಮಹದೇವ ಮುಖಂಡರಾದ ಹನೂರಿನ ರಾಜು, ಕೊಳ್ಳೇಗಾಲದ ರಾಚಶೆಟ್ಟಿ, ಚಾ.ನಗರದ ಬಸವಣ್ಣ, ರಾಮಾಪುರದ ಸಿದ್ದರಾಜು, ಮ.ಬೆಟ್ಟದ ರಾಜು ಇತರರು ಇದ್ದರು.