ಹಗ್ಗಕಟ್ಟಿ ಕಾರ್ ಎಳೆದೊಯ್ದ ಕಾರ್ಯಕರ್ತರು

BJP
Published on

ಚಿತ್ರದುರ್ಗ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು, ಮುಖಂಡರು ಗುರುವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು. ಕಾರೊಂದಕ್ಕೆ ಹಗ್ಗಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು.

ಬಿಜೆಪಿ ಬಾವುಟ, ಭಿತ್ತ್ತಿಪತ್ರ ಹಿಡಿದು, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ವಿಪರೀತ ತೆರಿಗೆ ಶುಲ್ಕ ಹೆಚ್ಚಳದ ಅಭಿಯಾನಕ್ಕೆ ರಾಜ್ಯ ಸರ್ಕಾರ ಮುಂದಾದಂತಿದೆ. ಇದಕ್ಕೆ ತೈಲ, ಆಸ್ತಿ, ವಾಹನ, ಅಬಕಾರಿ, ವಿದ್ಯುತ್, ಪುರುಷರ ಬಸ್ ಪ್ರಯಾಣ, ಹಾಲಿನ ಉತ್ಪನ್ನಗಳು ಸೇರಿ ಇನ್ನಿತರೆ ದರ ಏರಿಕೆಯಾಗಿರುವುದೇ ನಿದರ್ಶನ. ಈ ಮೂಲಕ ಕರ್ನಾಟಕದ ಜನರ ಜೀವನವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್ ಬಿಡುಗಡೆಯಾಗುತ್ತಿಲ್ಲ. ಇದರಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ. ರಾಜ್ಯದಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರಗಳ ಬೆಲೆಯನ್ನೂ ಹೆಚ್ಚಿಸಿದ್ದಾರೆ. ಹೀಗಾಗಿ ರೈತ, ಕಾರ್ಮಿಕ, ಎಸ್ಸಿ-ಎಸ್ಟಿ-ಒಬಿಸಿ ಸೇರಿ ಜನವಿರೋಧಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ತಡೆಯುವುದರ ಜೊತೆಗೆ ತೈಲ ದರ ಏರಿಕೆ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಕೋರಿದರು.

ಮಹಿಳಾ ಅಧ್ಯಕ್ಷೆ ಶೈಲಜಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಸೌಭಾಗ್ಯಾ ಬಸವರಾಜನ್, ಮುಖಂಡರಾದ ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಬಸಮ್ಮ, ಮಂಜುಳಾ, ರವಿಶಂಕರ್, ಸೀತಾರಾಂರೆಡ್ಡಿ, ಗಾ.ನಾ.ಲಿಂಗರಾಜು, ನಂದಿ ನಾಗರಾಜ್, ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ಶ್ರೀನಿವಾಸ್, ಹರೀಶ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net