

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ವೈರಸ್ ಆರ್ಭಟ ಮುಂದುವರಿದಿದೆ. ಹೋಂ ಮತ್ತು ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಜನರು ಎಲ್ಲೆಂದರಲ್ಲಿ ಸುತ್ತಾಡುತ್ತಿರುವುದರಿಂದ ಸೋಂಕು ವ್ಯಾಪಿಸತೊಡಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದು ಕ್ವಾರಂಟೈನ್ನಲ್ಲಿ ಇರುವ ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಹೆಸರಿಗೆ ಮಾತ್ರ ಕ್ವಾರಂಟೈನ್ನಲ್ಲಿ ಇರುವ ಜನರು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಅವರ ಕಣ್ತಪ್ಪಿಸಿ ಕ್ವಾರಂಟೈನ್ನಲ್ಲಿ ಇರುವವರು ಹೊರಗೆ ಸುತ್ತಾಡುತ್ತಿದ್ದಾರೆ.
ಮುಂಬೈಯಿಂದ ನಗರದ ಸೆಟಲ್ವೆುಂಟ್ ಪ್ರದೇಶಕ್ಕೆ ಬಂದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇವರಿಂದ ಆರು ಜನರಿಗೆ ಸೋಂಕು ತಗುಲಿತ್ತು. ಇವರ ಜತೆ ಸಂಪರ್ಕ ಹೊಂದಿದ 25ಕ್ಕೂ ಹೆಚ್ಚು ಜನರನ್ನು ಸರ್ಕಾರಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಆದರೆ, ಇವರಲ್ಲಿ ಕೆಲವರು ಹಗಲಿನಲ್ಲಿ ನಗರದಲ್ಲಿ ಸುತ್ತಾಡಿದರೆ, ರಾತ್ರಿ ಮನೆಗೆ ಹೋಗಿಬಂದಿದ್ದಾರೆ ಎಂದು ಸೆಟಲ್ವೆುಂಟ್ನ ಜನರೇ ಆರೋಪಿಸಿದ್ದಾರೆ. ಇವರಲ್ಲಿ ಯಾರಿಗಾದರೂ ಸೋಂಕು ಇದ್ದರೆ ಏನು ಗತಿ? ಎಷ್ಟು ಮಂದಿಗೆ ಸೋಂಕು ಹಬ್ಬಿಸುತ್ತಾರೋ?ಹೀಗಾದರೆ, ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಹೋಂ ಕ್ವಾರಂಟೈನ್, ಸರ್ಕಾರಿ ಕ್ವಾರಂಟೈನ್ನಲ್ಲಿರುವ ಜನರು ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. 14 ದಿನಗಳನ್ನು ಕಟ್ಟುನಿಟ್ಟಾಗಿ ಪೂರೈಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸದ್ಯ ಜಿಲ್ಲೆಯಲ್ಲಿ 2151 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. 290 ಜನರು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ.
ಗ್ರಾಮೀಣ ಭಾಗಕ್ಕೂ ಲಗ್ಗೆ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕು ಪತ್ತೆಯಾದ ಪೈಕಿ ಬಹುತೇಕರು ಗದಗ ನಗರವಾಸಿಗಳು ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿದ್ದವರು. ಆದರೆ, ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಕಳವಳ ಮೂಡಿಸಿದೆ. ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಜೂ. 3ರಂದು ಸೋಂಕು ಕಾಣಿಸಿಕೊಂಡಿದ್ದ 44 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಜೂ. 6 ರಂದು ಅದೇ ಗ್ರಾಮದ 29 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿತ್ತು. ಗದಗ ತಾಲೂಕಿನ ಕೋಟುಮಚಗಿಯ 59 ವರ್ಷದ ವ್ಯಕ್ತಿಗೆ ಜೂ. 16 ರಂದು ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಿಂದ 6 ಜನರಿಗೆ ಸೋಂಕು ತಗುಲಿರುವುದು ಜೂ. 20ರಂದು ದೃಢಪಟ್ಟಿದೆ. ಹುಬ್ಬಳ್ಳಿ ನಿವಾಸಿಯೊಬ್ಬರು ಜೂ. 6ರಂದು ತಮ್ಮ ಪತ್ನಿಯ ತವರೂರಾದ ಗದಗ ತಾಲೂಕಿನ ಹರ್ತಿ ಗ್ರಾಮಕ್ಕೆ ಬಂದು ಹೋಗಿದ್ದರು. ಅವರಿಗೆ ಜೂ. 12ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇವರ ಸಂಪರ್ಕದಿಂದ ಹರ್ತಿ ಗ್ರಾಮದ ಐವರಿಗೆ ಸೋಂಕು ತಗುಲಿದೆ. ಕುರಡಗಿ ಗ್ರಾಮದ ಒಬ್ಬರು ಮತ್ತು ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ ಒಬ್ಬರು ಸೇರಿ ಈವರೆಗೆ ಗ್ರಾಮೀಣ ಭಾಗದಲ್ಲಿ ಒಟ್ಟು 29 ಜನರಿಗೆ ಸೋಂಕು ತಗುಲಿದೆ.
ಕ್ವಾರಂಟೈನ್ ಅಲರ್ಟ್ ಸಿಸ್ಟಮ್ ಆರಂಭ
ಕೋವಿಡ್-19 ತಡೆಗಟ್ಟಲು ಸರ್ಕಾರ ಕೋವಿಡ್-19 ಕ್ವಾರಂಟೈನ್ ಅಲರ್ಟ್ ಸಿಸ್ಟಮ್ ಅನ್ನು ಸೋಮವಾರ ಆರಂಭಿಸಿದೆ. ಈ ವ್ಯವಸ್ಥೆಯಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಹೋಂ ಕ್ವಾರಂಟೈನ್ಗೆ ಕಳುಹಿಸಲಾಗುತ್ತಿ್ತೆ. ಇಂತಹ ವ್ಯಕ್ತಿಗಳ ಮೊಬೈಲ್ಫೋನ್ ನಂಬರ್ಗಳ ನೆಟ್ವರ್ಕ್ ಆಧಾರದ ಮೇಲೆ ಕ್ವಾರಂಟೈನ್ನಿಂದ ಹೊರಗೆ ಬರದಂತೆ ನಿಗಾ ವಹಿಸಲು ಅವರ ಚಲನ-ವಲನ ಗಮನಿಸಲಾಗುತ್ತಿದೆ. ಒಂದು ವೇಳೆ ಕ್ವಾರಂಟೈನ್ ಮಾಡಲಾಗಿರುವ ವ್ಯಕ್ತಿಗಳು ಕ್ವಾರಂಟೈನ್ ಪ್ರದೇಶ ವ್ಯಾಪ್ತಿ ಮೀರಿ ಹೊರಬಂದರೆ ಹಾಗೂ ಮೊಬೈಲ್ಫೋನ್ ಸ್ವಿಚ್ ಆಫ್ ಮಾಡಿದರೆ ಈ ಕುರಿತು ಎಚ್ಚರಿಕೆ ಸಂದೇಶವು ರಾಜ್ಯ ಸಮೀಕ್ಷಾ ಘಟಕದ ಮೂಲಕ ಸಂಬಂಧಿಸಿದ ಅಧಿಕಾರಿಗೆ ಬರುತ್ತದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಾಗೂ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ನಲ್ಲಿರುವಂತೆ ನಿಯಂತ್ರಿಸಲಾಗುತ್ತಿದೆ. ಆದರೂ ಕ್ವಾರಂಟೈನ್ ಇದ್ದವರು ಮನೆಯಿಂದ ಬೇರೆಡೆ ಬಂದರೆ ಅಂಥವರಿಗೆ ನೋಟಿಸ್ ನೀಡಲಾಗುತ್ತಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಪ್ರದೇಶದಿಂದ ಹೊರಗೆ ಹೋಗುವುದಾಗಲಿ, ತಮ್ಮ ಮೊಬೈಲ್ಫೋನ್ಗಳನ್ನು ಸ್ವಿಚ್ ಆಫ್ ಮಾಡುವುದಾಗಲಿ ಮಾಡಬಾರದು. ಉದ್ದೇಶಪೂರ್ವಕವಾಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಮೊಬೈಲ್ಫೋನ್ ಸ್ವಿಚ್ ಆಫ್ ಮಾಡಿದರೆ ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಐಪಿಸಿ ಸೆಕ್ಷನ್ 188ರಡಿ ಎಫ್ಐಆರ್ ದಾಖಲಿಸಲಾಗುವುದು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ ಗದಗ