

ಹುಬ್ಬಳ್ಳಿ: ಕರೊನಾ ಸೋಂಕಿಗೆ ತಮ್ಮೂರಿನ ಜನ ತುತ್ತಾಗಬಾರದೆಂಬ ಉದ್ದೇಶದಿಂದ ಹುಬ್ಬಳ್ಳಿ ಹೊರವಲಯದ ಹೊಸ ಗಬ್ಬೂರಿನ ಯುವಕರು ಹೊಸಬರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಹೊಸ ಗಬ್ಬೂರ ಪ್ರವೇಶದ ಸುತ್ತಲಿನ ಐದಾರು ರಸ್ತೆಗಳಿಗೆ ಅಡ್ಡಲಾಗಿ ಕಟ್ಟಿಗೆಗಳನ್ನು ಕಟ್ಟಿ, ಹೊಸಬರು ಯಾರೂ ಗ್ರಾಮದೊಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಯಾರಾದರೂ ಹೊರಗೆ ಹೋಗಬೇಕೆಂದರೆ ಒಂದು ಕುಟುಂಬದಿಂದ ಒಬ್ಬರು ಮಾತ್ರ ಹೋಗಬೇಕೆಂದು ಷರತ್ತು ವಿಧಿಸಿದ್ದಾರೆ.
ಹೊರಗಿನವರು ಗ್ರಾಮದ ಒಳಗೆ ಹೋಗುವುದು ಅನಿವಾರ್ಯ ಆದಲ್ಲಿ ಅವರು ಸಮೀಪದ ಪೊಲೀಸ್ ತಪಾಸಣಾ ನಾಕಾದಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು ಅಗತ್ಯ.
ಗ್ರಾಮದ ಸುತ್ತಲೂ ಸ್ವಯಂ ಪ್ರೇರಿತವಾಗಿ ರಸ್ತೆಗಳನ್ನು ಬಂದ್ ಮಾಡಿರುವ ಇಲ್ಲಿನ ಯುವಕರು, ಹಗಲು- ರಾತ್ರಿ ಎನ್ನದೆ 24 ತಾಸೂ ಸರದಿಯಲ್ಲಿ ಕಾವಲು ಕಾಯುತ್ತಿದ್ದಾರೆ.
ಹುಬ್ಬಳ್ಳಿಯ ಕರೊನಾ ಸೋಂಕಿತ ವ್ಯಕ್ತಿಯ ಮನೆ ಇರುವುದು ಹೊಸ ಗಬ್ಬೂರನಿಂದ ಕೇವಲ ಎರಡೂವರೆ ಕಿಮೀ ದೂರದಲ್ಲಿ. ಹೀಗಾಗಿ ಸೋಂಕಿತ ಯಾವೊಬ್ಬ ವ್ಯಕ್ತಿಯೂ ಗ್ರಾಮದಲ್ಲಿ ಪ್ರವೇಶ ಮಾಡಬಾರದೆಂದು ಇಲ್ಲಿನ ಯುವಕರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಕರೊನಾ ಸೋಂಕಿತರು ಹೊಸ ಗಬ್ಬೂರು ಪ್ರವೇಶಿದಂತೆ ಸುತ್ತಲೂ ನಿರ್ಬಂಧ ಹೇರಿ, ಸರದಿಯಲ್ಲಿ ಹಗಲಿರುಳು ಕಾವಲು ಕಾಯುತ್ತಿದ್ದೇವೆ. | ಪ್ರಕಾಶ ಗುಗ್ಗರಿ ಹೊಸ ಗಬ್ಬೂರ ಯುವಕ