

ಹಗರೆ: ಇಲ್ಲಿನ ಗ್ರಾಮದೇವತೆ ಶ್ರೀ ದೇವಿರಮ್ಮ ಮತ್ತು ಒಂಟಿಕತ್ತಯ್ಯನವರ ಜಾತ್ರೆ, ಕೊಂಡೋತ್ಸವ, ಸಿಡಿ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ದೇವಿರಮ್ಮ, ಮಾರಮ್ಮ, ಚೋಮ ದೇವರಿಗೆ ಗುರುವಾರ ಗಂಗಾಭಿಷೇಕ ಮಾಡಿ ಪೂಜೆ ಸಲ್ಲಿಸಿ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ರಾತ್ರಿಗಾಮದಲ್ಲಿ ದೇವರಿಗೆ ಪಟೇಲರೊಂದಿಗೆ ಸೇರಿ ಮುತ್ತೈದೆಯರು ಮಡಿಲಕ್ಕಿ ಕೊಟ್ಟು ನಂತರ ದೇವೀರಮ್ಮನವರ ಪಲ್ಲಕ್ಕಿ ಉತ್ಸವ ಮಾಡಲಾಯಿತು. ರಾತ್ರಿಯಿಡೀ ಚೋಮ ದೇವರು ಕುಣಿತವನ್ನು ಭಕ್ತರು ಕಣ್ತುಂಬಿಕೊಂಡು ಕರ್ಪೂರ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶನಿವಾರ ಬೆಳಗಿನ ಸೂರ್ಯೋದಯದ ಸಮಯದಲ್ಲಿ ಗ್ರಾಮದ ಮಲ್ಲೇಶ್ವರ ಹಾಗೂ ಶನಿದೇವ ದೇವಸ್ಥಾನಗಳಲ್ಲಿ ಮೂರ್ತಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ ಮಾಡಿ ಪೂಜೆ ನಂತರ ದೇವಾಲಯದ ಮುಂಭಾಗ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಯುವಕರು ದೇವರ ಅಡ್ಡೆಗಳನ್ನು ಹೊತ್ತು ಕೆಂಡ ತುಳಿದು ಭಕ್ತಿಪರವಶರಾದರು. ಹೂವಿನಿಂದ ಅಲಂಕೃತಗೊಂಡಿದ್ದ ದೇವೀರಮ್ಮನವರಿಗೆ ಪೂಜೆ ಸಲ್ಲಿಸಿದ ಭಕ್ತರು, ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಮುಂಭಾಗವಿರುವ ತೂಗುಯ್ಯಲೆಯಲ್ಲಿ ದೇವೀರಮ್ಮನವರನ್ನು ಕುಳ್ಳಿರಿಸಿ ತೂಗಲಾಯಿತು.