

ಚಿತ್ರದುರ್ಗ: ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಮೀಸಲು ರಕ್ಷಣೆ ಸೇರಿ ಹಲವು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗ ಶನಿವಾರ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿತು.
ನಮ್ಮ ಸಾಂವಿಧಾನಿಕ ಮೀಸಲು ಹಕ್ಕನ್ನು ರಕ್ಷಿಸಬೇಕು. ಕರ್ನಾಟಕ ತಾಂಡ, ಭೋವಿ, ಎಸ್‌ಸಿ, ಎಸ್‌ಟಿ, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಬೇಕು.
ಅಲೆಮಾರಿ ಸಮುದಾಯಗಳ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಭೋವಿ ಸಂಸ್ಕೃತಿ ಅಧ್ಯಯನ ಪ್ರಾಧಿಕಾರ ರಚಿಸಬೇಕು. ಬಂಜಾರ ಅಕಾಡೆಮಿಗೆ ಅನುದಾನದೊಂದಿಗೆ ಸಿಬ್ಬಂದಿ ನೇಮಿಸಬೇಕು. ಪರಿಶಿಷ್ಟ ಜಾತಿ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡದಂತೆ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಿಳ್ಳೆಕ್ಯಾತ ಸಮುದಾಯದ ಪರ್ಯಾಯ ಪದಗಳನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
ಒಕ್ಕೂಟದ ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಅಲೆಮಾರಿ ಸಮುದಾಯಗಳಿಗೆ ವಸತಿಗೆ ಯೋಜನೆ ರೂಪಿಸಬೇಕು. ಪರಿಶಿಷ್ಟ ಜಾತಿಗಳ ಯುವಕರಿಗೆ ಕುಲ ಕಸುಬು ಆಧಾರಿತ, ಅಗತ್ಯ ಕೌಶಲಾ ತರಬೇತಿ ನೀಡಬೇಕು. ಉದ್ಯೋಗಕ್ಕೆ ಪ್ರೋತ್ಸಾಹ ಅನುದಾನ ಒದಗಿಸ ಬೇಕೆಂದು ನಿಯೋಗ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿತು.
ಸಚಿವ ಶಿವರಾಜತಂಗಡಗಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಮಾನಪ್ಪ ವಜ್ಜಲ್, ಶಾಸಕಿ ಮಂಜುಳಾ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಸುಭಾಷ ರಾಠೋಡ, ಒಕ್ಕೂಟ ಅಧ್ಯಕ್ಷ ರವಿಮಾಕಳಿ, ಕಾರ್ಯಾಧ್ಯಕ್ಷ ರಾಘವೇಂದ್ರನಾಯ್ಕ, ಮುಖಂಡರಾದ ಅನಂತ್‌ನಾಯ್ಕ, ಆದರ್ಶ, ಯಲ್ಲಪ್ಪ, ಕಿರಣ್ ಕೊತ್ತಗೆರೆ, ಜಯದೇವನಾಯ್ಕ ಇತರರು ಇದ್ದರು.