

ಕೈಲಾಂಚ: ಅರಣ್ಯ ಹಕ್ಕುಪತ್ರಕ್ಕಾಗಿ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ವಡ್ಡರಹಳ್ಳಿ ಗೊಲ್ಲರದೊಡ್ಡಿಯ ಇರುಳಿಗರು 330 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬಿಎಸ್‌ಪಿ ಬೆಂಬಲ ನೀಡುವುದಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗೇಶ್ ತಿಳಿಸಿದರು.
ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ದೀನ ದಲಿತರು, ಹಿಂದುಳಿದ ವರ್ಗದವರು ನ್ಯಾಯಕ್ಕಾಗಿ ಅನೇಕ ವರ್ಷಗಳಿಂದ ನಾನಾ ಕಡೆ ಹೋರಾಟ ಮಾಡುತ್ತಿದ್ದಾರೆ. ಪ್ರಸ್ತುತ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ವರ್ಷದಿಂದ ಮಾಡುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಈವರೆಗೂ ಯಾರೊಬ್ಬರೂ ಗಮನಹರಿಸಿಲ್ಲ. ಇವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಆಗಿಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳು ಗಮನಿಸಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರೇ ಬಗರ್ ಹುಕುಂ ಹಾಗು ಬರಖಾಸ್ತು ಸಮಿತಿ ಅಧ್ಯಕ್ಷರಾಗಿದ್ದಾರೆ. ಶಾಸಕಿ ಅನಿತಾಕುಮಾರಸ್ವಾಮಿ ಹೋರಾಟಗಾರರ ಕುಂದುಕೊರತೆ ವಿಚಾರಿಸಿಲ್ಲ. ಸಂಸದ ಡಿ.ಕೆ. ಸುರೇಶ್ ಅವರು ಸಹ ಇತ್ತ ಮುಖ ಮಾಡಿಲ್ಲ. ಕನಿಷ್ಠ ಜೀವನ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಲು ಸರ್ಕಾರ ಸಹಕರಿಸುತ್ತಿಲ್ಲ. ಬಡವರಿಗೆ ಒಂದು ಶ್ರೀಮಂತರಿಗೊಂದು ನ್ಯಾಯ ಸರಿಯಲ್ಲ. ಕೆಳವರ್ಗದವರು ಮಾತ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾಯದರ್ಶಿ ಬಿ. ಅಂದಾನಪ್ಪ ಮಾತನಾಡಿ, ಕೊರೆಯುವ ಚಳಿಯಲ್ಲೂ ಇರುಳಿಗರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಆದೇಶ ಇದ್ದರು. ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಕೈಗಾರಿಕೆಗಳಿಗೆ ಸಾಗುವಳಿ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ವಿಷಯದಲ್ಲಿ ಶಾಸಕರು ವೇಗವಾಗಿ ಸ್ಪಂದಿಸುತ್ತಾರೆ. ಆದರೆ, ಅರಣ್ಯ ನಿವಾಸಿಗಳಿಗೆ ನೆರವು ನೀಡಲು ಮಾತ್ರ ಹಿಂದೇಟು ಹಾಕುತ್ತಾರೆ ಎಂದು ಆರೋಪಿಸಿದರು.
ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಮುರುಗೇಶ್, ಮಹಿಳಾ ಘಟಕ ಉಪಾಧ್ಯಕ್ಷೆ ಪಾರ್ವತಮ್ಮ, ಕನಕಪುರ ಘಟಕದ ಅಧ್ಯಕ್ಷ ಕಾಂತರಾಜು, ಮಾಗಡಿ ಘಟಕದ ಅಧ್ಯಕ್ಷ ರಾಮಣ್ಣ, ಮುಖಂಡರಾದ ಕೃಷ್ಣಮೂರ್ತಿ,ವೆಂಕಟಾಚಲ, ಶೋಭಾ, ಮಲ್ಲಂಗೆರೆ ಕೃಷ್ಣಪ್ಪ, ಕನಕಪುರ ಮಂಗಳಗೌರಮ್ಮ, ಅನು ಮುಂತಾದವರಿದ್ದರು.