

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಆದಿಹಳ್ಳಿ ಗ್ರಾಮದ ಸರ್ವೇ ನಂ.93ರ 314 ಎಕರೆ ಸರ್ಕಾರಿ ಗೋಮಾಳವನ್ನು ಅನುಭವದ ಆಧಾರದ ಮೇಲೆ ರೈತರಿಗೆ ಭೂ ಮಂಜೂರಾತಿ ಜತೆಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಆದಿಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಬ್ಯಾನರ್, ಭಿತ್ತಿಪತ್ರ ಹಿಡಿದು ಜಮಾವಣೆಗೊಂಡು ಕೆಲಕಾಲ ಘೋಷಣೆಗಳನ್ನು ಕೂಗಿದರು.
ಮುಖಂಡ ಕಲ್ಲೇಶಪ್ಪ ಮಾತನಾಡಿ, ಸರ್ಕಾರಿ ಗೋಮಾಳದಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಅನುಭವದ ಆಧಾರದ ಮೇಲೆ ಭೂ ಮಂಜೂರಾತಿ ನೀಡುವ ಬದಲು ಇನ್ಯಾರದ್ದೋ ಹೆಸರಿಗೆ ಪಹಣಿ ಬರುತ್ತಿರುವುದು ಆತಂಕ ತಂದಿದೆ. ಈ ಸಂಬಂಧ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದು ವರದಿ ನೀಡುವಂತೆ ಆದೇಶವಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಅನಧಿಕೃತವಾಗಿ ನೀಡಲಾಗುತ್ತಿರುವ ಪಹಣಿ ರದ್ದುಗೊಳಿಸುವ ಜತೆಗೆ ಬಡವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ವಿಭಾ ವಿ. ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ರೇಣುಕಪ್ಪ, ಲಲಿತಾ, ನಟರಾಜ್, ಚಂದ್ರು, ಶೈಲಜಾ, ರತ್ನಮ್ಮ, ಹಿರಿಯಣ್ಣ ಇತರರಿದ್ದರು.