

ಚಿತ್ರದುರ್ಗ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ) ದಾವಣಗೆರೆ ಉಪ ವಿಭಾಗದಿಂದ ನಗರದ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇ-ಸ್ವತ್ತು ಇಲ್ಲದೆ, ನೋಂದಣಿ ಮಾಡಲಾಗದು ಎಂಬ ಸಬೂಬು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ನೋಂದಣಿಗೆ ಆದೇಶಿಸುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
2021-22ನೇ ಸಾಲಿನಲ್ಲಿ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 2024ರ ಸೆ. 9ರಿಂದ ಈಚೆಗೆ ಕ್ರಯಪತ್ರ, ಇ-ಸ್ವತ್ತು ಇಲ್ಲದೆ, ನೋಂದಣಿ ಮಾಡಿಕೊಡುತ್ತಿಲ್ಲ. ಇದರಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ನೋಂದಣಿ ಮಾಡಲು ಉಪ ನೋಂದಣಾಧಿಕಾರಿ, ನಗರಸಭೆ ಪೌರಾಯುಕ್ತರಿಗೂ ಸೂಚಿಸಬೇಕು ಎಂದು ಕೋರಿದರು.
ಸಮಿತಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಎನ್.ರಂಗಸ್ವಾಮಿ, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಎಚ್.ಪ್ಯಾರೇಜಾನ್, ಮೈಲಾರಪ್ಪ, ಇಮಾಮ್‌ಸಾಬ್, ಶಬಿನಾ, ರಜಿಯಾ, ರಾಧಮ್ಮ, ಇಮ್ರಾನ್ ಇತರರಿದ್ದರು.