

ಮಳವಳ್ಳಿ: ತಾಲೂಕಿನ ಶಿವನಸಮುದ್ರ ಬಳಿ ಇರುವ ಮಲ್ಲಿಕ್ಯಾತನಹಳ್ಳಿ ಗ್ರಾಮದಲ್ಲಿ ಮೂರು ದಶಕಗಳಿಂದ ವಾಸವಾಗಿರುವ ಕುಟುಂಬದವರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಂತ್ರಸ್ತ ನಿವಾಸಿಗಳು ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟಗಾರರ ಜತೆಗೂಡಿ ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿಯಿಂದ ಹಕ್ಕೊತ್ತಾಯದ ರ‌್ಯಾಲಿಯಲ್ಲಿ ತೆರಳಿದ ಧರಣಿ ನಿರತರು, ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತರು. ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್‌ರಾಜ್ ಮಾತನಾಡಿ, ಮಲ್ಲಿಕ್ಯಾತನಹಳ್ಳಿ ಸರ್ವೆ ನಂ. 375 ರಲ್ಲಿ ಈಗಾಗಲೇ ವಾಸಮಾಡುತ್ತಿರುವ 80 ಕುಟುಂಬಗಳಿಗೆ ಗ್ರಾಪಂ ವತಿಯಿಂದ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಸ್ಥಳ ಪರಿಶೀಲನೆ ಮಾಡಿ ವರದಿ ಸಿದ್ಧಪಡಿಸುವುದರ ಜತೆಗೆ ನಿವೇಶನ ರಹಿತರ ಪಟ್ಟಿಯನ್ನೂ ತಯಾರಿಸಲಾಗಿದೆ.
ಆದರೆ 2016 ರಲ್ಲಿ 94ಅ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದಾಗ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ವಾಸವಿಲ್ಲ, ಮನೆ ಕಟ್ಟಿಲ್ಲ ಎಂದು ಸುಳ್ಳು ವರದಿ ನೀಡಿರುತ್ತಾರೆ. ಇದರಿಂದ ಗ್ರಾಮದ ನಿವಾಸಿಗಳು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ. ಇಲಾಖೆಗೆ ನೈಜತೆಯನ್ನು ಮರೆಮಾಚಿ ತಪ್ಪು ಮಾಹಿತಿ ನೀಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಅಲ್ಲಿನ ಗೋಮಾಳದಲ್ಲಿ 120 ಎಕರೆ ಜಮೀನಿದ್ದು, ಈಗಾಗಲೇ 3.20 ಎಕರೆಯ ಹಕ್ಕನ್ನು ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ್ದರೂ ಅದನ್ನು ಕಲಂ 9 ರಲ್ಲಿ ಸೇರ್ಪಡೆ ಮಾಡಿಸಿಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ತಾಲೂಕು ಪಂಚಾಯಿತಿ ಇಒ ವಿಫಲರಾಗಿದ್ದಾರೆಂದು ಆರೋಪಿಸಿದರು. ಈ ವಿಚಾರವಾಗಿ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಅಹವಾಲು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು, ಬಡ ಕೂಲಿಕಾರರಿಗೆ ಹಕ್ಕುಪತ್ರ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ ಎಂದರು. ಕೂಡಲೇ ಮೂಲ ನಿವಾಸಿಗಳಿ ಹಕ್ಕುಪತ್ರ ವಿತರಿಸಲು ಕ್ರಮ ವಹಿಸದಿದ್ದರೆ ಉಗ್ರ ಹೋರಾಟಕ್ಕೆ ಸಿದ್ದರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಕೆ.ಎನ್. ಲೋಕೇಶ್ ಮತ್ತು ತಾಪಂ ಇಒ ರಾಮಲಿಂಗಯ್ಯ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ತಿಂಗಳೊಳಗೆ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಉಪಾಧ್ಯಕ್ಷ ಗುರುಸ್ವಾಮಿ, ಶಿವಕುಮಾರ್, ಮರಿಲಿಂಗೇಗೌಡ, ಜಿ. ರಾಮಕೃಷ್ಣ, ವಿಷಕಂಠ ರಾಜು, ಮೀನಾಕ್ಷಮ್ಮ , ರಾಜಮ್ಮ , ಮಹಾದೇವು, ಸತೀಶ್, ಸುನಿಲ್ ಸೇರಿದಂತೆ ಇತರರಿದ್ದರು.