ಹಕ್ಕುಗಳೊಂದಿಗೆ ಜವಾಬ್ದಾರಿಯೂ ಮುಖ್ಯ: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್

mysore
Published on

ಮೈಸೂರು: ಜವಾಬ್ದಾರಿ ಇಲ್ಲದೆ ಹಕ್ಕುಗಳನ್ನು ನೀಡಿದರೆ ಆ ಹಕ್ಕುಗಳು ಜವಾಬ್ದಾರಿಯುತವಾಗಿ ನಿರ್ವಹಿಸಲ್ಪಡುವುದಿಲ್ಲ. ಹಕ್ಕುಗಳ ಜತೆಗೆ ಜವಾವ್ದಾರಿಯು ಸಹ ಮುಖ್ಯವಾಗುತ್ತದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ರಾಜ್ಯ ಪತ್ರಾಗಾರ ಇಲಾಖೆಯಿಂದ ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದರು.

ಅಂದು ಆಡಳಿತ ನಡೆಸುತ್ತಿದ್ದ ರಾಜರು ತಾಯಿಯ ಗರ್ಭದಲ್ಲಿ ಜನಿಸಿದರೆ, ಇಂದು ಆಡಳಿತ ನಡೆಸುವವರು ಮತದಾನದ ಪೆಟ್ಟಿಗೆಯಲ್ಲಿ ಜನಿಸುವರು. ಲಂಡನ್‌ನಲ್ಲಿ ಪ್ರಜಾಪ್ರಭುತ್ವದ ಬಿತ್ತನೆ ಆರಂಭವಾಯಿತು. ಅಂತೆಯೇ 12ನೇ ಶತಮಾನದಲ್ಲೇ ಕರ್ನಾಟಕದಲ್ಲಿ ಬಸವಣ್ಣನವರ ಅನುಭವ ಮಂಟಪವು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿತು. ಅದರ ಪ್ರತಿರೂಪ ಎಂಬಂತೆ ಮೈಸೂರಿನಲ್ಲಿ ರಾಜರ ಆಡಳಿತದಲ್ಲಿ ಪ್ರಜಾಪ್ರತಿನಿಧಿ ಸಭೆಯು ಆರಂಭವಾಯಿತು ಎಂದರು.

ರಾಜನಾದವನು ನಿರಂಕುಶವಾದವನ್ನು ಬದಿಗೊತ್ತಿ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ್ದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ. ಬ್ರಿಟನ್‌ನಲ್ಲಿ ನಡೆದ ಹೋರಾಟ, ಹಿರೋಶಿಮಾ, ನಾಗಾಸಾಕಿಯಲ್ಲಿ ಬಿದ್ದ ಸೈನಿಕರ ನೆತ್ತರು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ನಂತರದ ದಿನಗಳಲ್ಲಿ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿತು ಎಂದರು.

ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ ನಮಗೆಲ್ಲ ದಾರಿದೀಪ. ಇಂದು ಜನಸಾಮಾನ್ಯರಾದ ನಾವೆಲ್ಲರೂ ಹೋರಾಟದ ಪ್ರವೃತ್ತಿ, ಪ್ರಶ್ನಿಸುವ ಮನೋಭಾವ ಅಳವಡಿಸಿಕೊಳ್ಳಬೇಕು ಎಂದರು.

ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಮಾತನಾಡಿ, ಪ್ರಜಾಪ್ರತಿನಿಧಿ ಸಭೆಯು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ. ನಾಡು-ನುಡಿ ಸಂಬಂಧಿಸಿದ ಮೂಲ ದಾಖಲೆಗಳ ಸಂರಕ್ಷಣೆ ನಮ್ಮೆಲ್ಲರ ಗುರುತರ ಜವಾಬ್ದಾರಿ.

ಈ ನಿಟ್ಟಿನಲ್ಲಿ ಐತಿಹಾಸಿಕ ದಾಖಲೆಗಳ ಮಹತ್ವದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಪತ್ರಾಗಾರ ಇಲಾಖೆಯು ವಿಚಾರ ಸಂಕಿರಣ, ಪತ್ರಾಗಾರ ಕೂಟ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ಪ್ರತಿಯೊಬ್ಬರೂ ತಮಗೆ ನೀಡಿರುವ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಹಾಗೂ ಕರ್ತವ್ಯ ನಿರ್ವಹಿಸಬೇಕು. ಪ್ರಜ್ಞಾವಂತರಾಗಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು.

ಪ್ರತಿಯೊಂದು ಜೀವಿಗೂ ಘನತೆಯಿಂದ ಬದುಕುವ ಹಕ್ಕಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇದನ್ನು ಅರಿತು ಮಾನವೀಯತೆಯ ದಾರಿಯಲ್ಲಿ ನಮ್ಮ ನಡೆ ಇರಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಪ್ರೊ.ಆರ್.ಮೂಗೇಶಪ್ಪ, ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ.ಸಾಂಬಶಿವಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net