

ಗುಡಿಬಂಡ : ಬಲಿಜ ಸಮಾಜವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ, ಸಮಾಜವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡಲು ಒಗ್ಗಟ್ಟಿನ ಹೋರಾಟದ ಮೂಲಕ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಬೇಕಾಗಿದೆ ಎಂದು ಮುಖಂಡ ಬೊಮ್ಮನಹಳ್ಳಿ ನಂಜುಂಡಪ್ಪ ಹೇಳಿದರು.
ಪಟ್ಟಣದ ಮುತ್ಯಾಲಮ್ಮ ದೇವಸ್ಥಾನದ ಭದ್ರೋಳ್ಳ ತಿಮ್ಮಕ್ಕ ಬಲಿಜ ಹಾಸ್ಟಲ್‌ನಲ್ಲಿ ತಾಲೂಕು ಬಲಿಜ ಸಂ ಭಾನುವಾರ ಹಮ್ಮಿಕೊಂಡಿದ್ದ ಕಾಲಜ್ಞಾನಿ ಸದ್ಗುರು ಶ್ರೀಕೈವಾರ ಯೋಗಿನಾರೇಯಣ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮುದಾಯದವರು ಹಕ್ಕುಗಳನ್ನು ಪಡೆಯಲು ಮನಸ್ಥಾಪಬಿಟ್ಟು ಒಗ್ಗಟ್ಟಾಗಬೇಕು ಎಂದರು.
ಶ್ರೀ ಯೋಗಿನಾರೇಯಣ ಯತೀಂದ್ರರೇ ಕೈವಾರ ತಾತಯ್ಯ ಹೆಸರಿನಲ್ಲಿ ಖ್ಯಾತರಾಗಿದ್ದು, ಅವರ ಕಾಲಜ್ಞಾನ ಜಗತ್ತಿನಲ್ಲಿ ಪ್ರಖ್ಯಾತಿ ಹೊಂದಿದೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಸಲಹೆ ನೀಡಿದರು.
ಮೊದಲ ಬಾರಿಗೆ ರಾಜ್ಯಾದ್ಯಂತ ಕೈವಾರ ತಾತಯ್ಯನವರ ಜಯಂತಿಯನ್ನು ಎಲ್ಲ ತಾಲೂಕು ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 40 ಲಕ್ಷದಷ್ಟಿದ್ದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ 2ಎ ಮೀಸಲಾತಿ ನೀಡಬೇಕು ಎಂದು ತಾಲೂಕು ಬಲಿಜ ಸಂದ ಕಾರ್ಯದರ್ಶಿ ಪ್ರಕಾಶ್ ಒತ್ತಾಯಿಸಿದರು.
2011ರಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಪ್ರವರ್ಗ2ಎ ಮೀಸಲಾತಿ ಸೌಲಭ್ಯ ನೀಡಿದೆ, ಇನ್ನುಳಿದಂತೆ ರಾಜಕೀಯ, ಉದ್ಯೋಗದಲ್ಲಿ ಪ್ರವರ್ಗ 3ಎ ರಲ್ಲೇ ಮುಂದುವರಿಸಿರುವುದು ಸಮುದಾಯಕ್ಕೆ ಮಾಡಿರುವ ಅನ್ಯಾಯ ಮುಖಂಡ ಗರುಡಾಚಾರ್ಹಳ್ಳಿ ಅಮರೇಶ್ ಆರೋಪಿಸಿದರು.
ಪಪಂ ಮಾಜಿ ಅಧ್ಯಕ್ಷ ದ್ವಾರಕನಾಥ್ ನಾಯ್ಡು, ಚಂದ್ರಶೇಖರ್ ನಾಯ್ಡು, ಮಾಜಿ ಸದಸ್ಯ ರಾಜಪ್ಪ, ಜಿ.ಟಿ.ಆನಂದ್, ಜಿ.ಎಂ.ಅನಿಲ್ ಕುಮಾರ್, ಗ್ರಾಪಂ ಸದಸ್ಯ ಶಿವರಾಮ್, ಮುಖಂಡರಾದ ವೆಂಕಟರಾಯಪ್ಪ, ಜಿ.ಎಚ್.ವೆಂಕಟೇಶಪ್ಪ, ನಿರ್ಮಲಮ್ಮ, ಬಂಡಾರಿ ಗಂಗಾಧರ, ರಮೇಶ್ ಬಂಟು, ಗುಂಪು ಮರದ ಆನಂದ್ ,ಲಕ್ಷೆಸಾಗರ ಶೇಖರ್, ಚಲಪತಿ ಮತ್ತಿತರರು ಇದ್ದರು.