

ಹಾಸನ : ಪ್ರಜೆಗಳಿಗಾಗಿ ಸಂವಿಧಾನ ನೀಡಿರುವ ಒಂದೊಂದೇ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ ಈಗ ವಾಕ್ ಸ್ವಾತಂತ್ರವನ್ನು ಕಸಿದುಕೊಳ್ಳಲು ಕೈ ಹಾಕಿದೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡಗಳ ಐಕ್ಯತಾ ಸಮಾವೇಶ ಮತ್ತು ಆರ್.ಧ್ರುವನಾರಾಯಣ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ದುರಾಡಳಿತವನ್ನು ಜನರು ಅರ್ಥ ಮಾಡಿಕೊಂಡು ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸದಿದ್ದರೆ, ನಮ್ಮ ಎಲ್ಲಾ ಹಕ್ಕುಗಳನ್ನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮಾದರಿ ಸಂವಿಧಾನ ಎಲ್ಲಾ ಜನಾಂಗದವರ ಒಳಿತಿಗಾಗಿ ರೂಪುಗೊಂಡಿದೆ. ಅದರ ಆಶಯಗಳು ಸಾರ್ವಕಾಲಿಕ. ಅದನ್ನು ಒಪ್ಪದ ಬಿಜೆಪಿಯ ಕೆಲವು ನಾಯಕರು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಅಧಿಕಾರಾವಧಿಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ಯಾವುದೇ ಕೊಡುಗೆ ನೀಡದೆ, ಚುನಾವಣೆ ಕಾರಣಕ್ಕೆ ಆ ಜನಾಂಗದವರ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ತತ್ವ ಅಳವಡಿಸಿಕೊಂಡು ಜವಾಬ್ದಾರಿಯುತ ನಡವಳಿಕೆ ಹೊಂದಿದ್ದ ಆರ್.ಧ್ರುವನಾರಾಯಣ್ ಅವರು ನನ್ನ ಸ್ನೇಹಿತ ಮಾತ್ರವಲ್ಲದೇ ನಮ್ಮ ನಾಯಕನಾಗಿದ್ದರು. ಅವರು ನನ್ನೊಂದಿಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಷ ಬಲವರ್ಧನೆ, ನಾಯಕತ್ವ ವೃದ್ಧಿಗೆ ಸಂಬಂಧಿಸಿ ಪ್ರತಿ ಹಂತದ ನಾಯಕರು ಹಾಗೂ ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸುತ್ತಿದ್ದ ಅವರು ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ತನ್ನ ಕ್ಷೇತ್ರ, ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಅವರು ನಮ್ಮನ್ನು ಇಷ್ಟು ಬೇಗ ಅಗಲಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ಧರ್ಮಸೇನ ಮಾತನಾಡಿ, ಅಧಿಕಾರ ಸಿಗುವ ಸಂದರ್ಭ ಒದಗಿ ಬಂದಾಗ ಅಂತಹ ನಾಯಕರನ್ನು ತುಳಿಯುವ ಕೆಲಸ ಇತ್ತೀಚೆಗೆ ಹೆಚ್ಚಾಗಿದೆ. ದಶಕಗಳ ಕಾಲ ಜನಪರವಾಗಿ ಗುರುತಿಸಿಕೊಂಡು ವಿಶ್ವಾಸದಿಂದ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುವ ನಾಯಕರಿಗೆ ಟಿಕೆಟ್ ತಪ್ಪಿಸಿ ಮೂಲೆಗುಂಪು ಮಾಡಿರುವ ಎಷ್ಟೋ ಉದಾಹರಣೆಗಳು ನಮ್ಮ ನಡುವೆ ಇವೆ. ಆ ಪೈಕಿ ನಮ್ಮ ತಂದೆ ಬಿ.ರಾಚಯ್ಯ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಾಣಸಿಗುತ್ತಾರೆ ಎಂದು ತಮ್ಮ ಪಕ್ಷದ ಬಗ್ಗೆಯೇ ಅಸಮಾದಾನ ಹೊರಹಾಕಿದರು.
ಚಾಮರಾಜನಗರ ಜಿಲ್ಲೆಗೆ ಅಂಟಿಕೊಂಡಿದ್ದ ಹಿಂದುಳಿದ ಹಣೆಪಟ್ಟಿ ಕಳಚಲು ಎಚ್.ಎಸ್. ಮಹದೇವಪ್ರಸಾದ್ ಅವರೊಂದಿಗೆ ಆರ್.ಧ್ರುವನಾರಾಯಣ್ ಪಾತ್ರವೂ ಹಿರಿದಾಗಿದೆ. ಪರಿಶಿಷ್ಟ ಸಮುದಾಯದ ಪರವಾಗಿ ಆಲೋಚಿಸುತ್ತಿದ್ದ ಅವರು ಜನಾನುರಾಗಿ ಎನಿಸಿದ ಅಪರೂಪದ ನಾಯಕ. ಉತ್ತಮ ಸಂಸದೀಯ ಪಟು ಎಂದು ಬಿರುದು ಪಡೆದ ದೇಶದ ಹತ್ತು ಸಂಸದರಲ್ಲಿ ಆರ್.ಧ್ರುವನಾರಾಯಣ್ ಸಹ ಒಬ್ಬರು ಎಂದು ಹೇಳಿಕೊಳ್ಳಲು ಕಾಂಗ್ರೆಸ್‌ಗೆ ಹೆಮ್ಮೆ ಎನಿಸುತ್ತದೆ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಎರಡನೇ ಅಂಬೇಡ್ಕರ್ ಎನಿಸಿಕೊಳ್ಳಲು ಅರ್ಹರು. ಅವರ ನಾಯಕತ್ವದಲ್ಲಿ ಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ನೀಡಿ ಸರ್ಕಾರ ರಚಿಸುವಂತೆ ಮಾಡುವಲ್ಲಿ ಪರಿಶಿಷ್ಟ ಜಾತಿ, ಜನಾಂಗದವರ ಪಾತ್ರ ಮುಖ್ಯವಾಗಬೇಕು. ನಮ್ಮ ಪಕ್ಷದಲ್ಲಿನ ಗುಂಪುಗಾರಿಕೆ ಬಿಟ್ಟು ಎಲ್ಲರೂ ಒಂದೇ ದಿಕ್ಕಿನಲ್ಲಿ ಸಾಗಿ ಖರ್ಗೆ ಅವರ ಕೈ ಬಲಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ವಿಭಾಗದ ನೂತನ ಅಧ್ಯಕ್ಷರಾಗಿ ಮಲ್ಲಿವಾಳು ದ್ಯಾವಪ್ಪ ಅವರು ಹಿಂದಿನ ಅಧ್ಯಕ್ಷ ಡಾ.ಮುನಿಸ್ವಾಮಿ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ.ಎಚ್.ಲಕ್ಷ್ಮಣ್, ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ವಿಧಾನ ಪರಿಷತ್ ಸದಸ್ಯ ಮಾಜಿ ಎಂ.ಎ.ಗೋಪಾಲಸ್ವಾಮಿ, ಆಲೂರು-ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್, ಮುಖಂಡರಾದ ಎಚ್.ಕೆ.ಮಹೇಶ್, ದೇವರಾಜೇಗೌಡ, ಇತರರು ಭಾಗವಹಿಸಿದ್ದರು.