

ಮೈಸೂರು: ಮಕ್ಕಳು, ಮಹಿಳೆಯರು, ದುರ್ಬಲರ ಹಕ್ಕುಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿವೆ. ಇದನ್ನು ತಡೆಗಟ್ಟಲು ಸಮರ್ಪಕ ಶಿಕ್ಷಣ ನೀಡಬೇಕು ಎಂದು ಬೆಂಗಳೂರಿನ ಮಾನಸ-ಸಿಕ್ರಂನ ಕಾರ್ಯಕಾರಿ ನಿರ್ದೇಶಕಿ ಮಾರ್ಗರೇಟ್ ಸಂಪತ್ ಹೇಳಿದರು.
ಮೈವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮಂಗಳವಾರ ಆಯೋಜಿಸಿದ್ದ ‘ನಮ್ಮ ಹಕ್ಕುಗಳು, ನಮ್ಮ ಭವಿಷ್ಯ’ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಮಾನವ ಹಕ್ಕುಗಳ ಸಂರಕ್ಷಣೆ ಹೆಚ್ಚಿನ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಿದೆ. ಪೊಲೀಸ್ ಇಲಾಖೆ ಜಾಗೃತಿಯಿಂದ ಕೆಲಸ ಮಾಡಿದರೆ ಮುಗ್ಧ ಜನರ ಮಾನವ ಹಕ್ಕುಗಳು ಉಲ್ಲಂಘನೆಯನ್ನು ನಿಯಂತ್ರಿಸಬಹುದಾಗಿದೆ ಎಂದರು.
ಸಮಸ್ತ ನಾಗರಿಕತೆ ಮತ್ತು ಭವಿಷ್ಯವೂ ಮಾನವ ಹಕ್ಕುಗಳನ್ನು ಅವಲಂಬಿಸಿದೆ. ಹೀಗಾಗಿ ಸ್ವಾತಂತ್ರೃ, ಸಮಾನತೆ, ವ್ಯಕ್ತಿ ಘನತೆಯ ಹಕ್ಕುಗಳು ಪ್ರಾಥಮಿಕ ಮೂಲ ಜೀವನ ಮತ್ತು ಜೀವದ ಹಕ್ಕುಗಳಾಗಿವೆ.
ಮಾನವ ಹಕ್ಕುಗಳು ಮನೆ ಮಾತಾಗಬೇಕು. ಎಲ್ಲರ ಜನಮಾಸದಲ್ಲಿ ಹಾಸುಹೊಕ್ಕಾಗಿ ಅಚ್ಚಳಿಯದೆ ಉಳಿಯಬೇಕು. ಜನತೆ ಸಬಲೀಕರಣಕ್ಕೆ ಮಾನವ ಹಕ್ಕುಗಳು ಅಗತ್ಯವಾಗಿವೆ ಎಂದರು.
ಹಕ್ಕುಗಳನ್ನು ಸದಾ ಜಾಗೃತಿಯಿಂದ ಅನುಭವಿಸುವ ಪ್ರಯತ್ನ ಮಾಡಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಂಡಂತೆ ಬೇರೆಯವರ ಹಕ್ಕನ್ನು ಸಂರಕ್ಷಣೆ ಮಾಡುವುದು ಮನುಷ್ಯನ ಆದ್ಯ ಕರ್ತವ್ಯವಾಗಬೇಕು. ಇದರಿಂದ ಮಾನವ ಹಕ್ಕುಗಳು ಉಳಿಯುತ್ತವೆ.
ಆದ್ದರಿಂದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ ಈ ವರ್ಷ ಜಗತ್ತಿನಾದ್ಯಂತ ‘ನಮ್ಮ ಹಕ್ಕುಗಳು, ನಮ್ಮ ಭವಿಷ್ಯ’ ಅಭಿಯಾನದ ಮೂಲಕ ಮಾನವ ಹಕ್ಕುಗಳ ಗೌರವಿಸುವ ಪರಿಪಾಲನೆ ಜವಾಬ್ದಾರಿಯ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೃಷ್ಣ ಹೊಂಬಾಳ್ ಮಾತನಾಡಿ, ನಾಗರಿಕ ಸಮಾಜದಲ್ಲಿ ಪ್ರಜ್ಞಾವಂತ ಜನರಲ್ಲಿ ಸೇರಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವುದು ಈಗಿನ ತುರ್ತು.
ನಮ್ಮ ಭವಿಷ್ಯವೂ ಕೂಡ ಮಾನವ ಹಕ್ಕುಗಳ ಮೇಲೆ ಅವಲಂಬನೆವಾಗಿದೆ ಎಂದರು. ಸಂಪನ್ಮೂಲ ಕೇಂದ್ರದ ಸಂಯೋಜಕ ಡಾ.ಎಸ್.ಎಸ್.ದೇವರಾಜು, ರಾಜ್ಯ ಸಂಶೋಧನಾ ಕೇಂದ್ರದ ಸಂಯೋಜಕ ಭೀಮಪ್ಪ ಇದ್ದರು.