

ಚಿಕ್ಕಬಳ್ಳಾಪುರ: ಸಮಾನತೆ, ಸಾಮರಸ್ಯ ಜೀವನದಿಂದ ಮಾನವ ಹಕ್ಕುಗಳ ಉಲ್ಲಂಘನೆ ತಪ್ಪುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯಪಟ್ಟರು.
ತಾಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿಸರ್ಗ ದತ್ತವಾದ ಸಂಪನ್ಮೂಲಗಳನ್ನು ಎಲ್ಲರೂ ಸಮವಾಗಿ ಹಂಚಿಕೊಂಡು ಜೀವನ ಸಾಗಿಸಬೇಕು. ಸಮಾಜದಲ್ಲಿ ಶಾಂತಿಯುತ ವಾತಾವರಣವಿರಬೇಕು. ಪ್ರತಿಯೊಬ್ಬ ಪ್ರಜೆಗೂ ಕರ್ತವ್ಯ ನಿರ್ವಹಣೆ ಜವಾಬ್ದಾರಿ ಜತೆಗೆ ಸಮಾನ ಹಕ್ಕುಗಳು ಇರುತ್ತವೆ. ಇವುಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದರು. ಯಾವುದೇ ವ್ಯಕ್ತಿಗಳಾಗಲಿ ಸಮಾಜದಲ್ಲಿ ಉತ್ತಮ ರೀತಿಯ ಜೀವನ ಸಾಗಿಸಲು ಮಾನವ ಹಕ್ಕುಗಳ ಸವಲತ್ತು ಸಹಕಾರಿ. ಈ ನಿಟ್ಟಿನಲ್ಲಿ ವಿಶೇಷ ಕಾನೂನು ನಿಯಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಸಂವಿಧಾನದಲ್ಲಿನ ಹಲವು ಕಾನೂನುಗಳ ಪೈಕಿ ಮಾನವ ಹಕ್ಕುಗಳ ರಕ್ಷಣೆ ನಿಯಮಗಳು ಹೆಚ್ಚಿನ ಮಹತ್ವ ಹೊಂದಿದೆ ಎಂದು ತಿಳಿಸಿದರು.
ಸಾಕಷ್ಟು ಕಾನೂನು ನಿಯಮಗಳು ಜಾರಿಯಲ್ಲಿದ್ದರೂ ಸಮರ್ಪಕ ಅನುಷ್ಠಾನದಲ್ಲಿ ಕೊರತೆ ಕಂಡು ಬಂದಿದೆ. ಇದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೇ ಹೆಚ್ಚು. ಇದಕ್ಕೆ ಕಾನೂನಾತ್ಮಕವಾಗಿ ಕಡಿವಾಣ ಹಾಕುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾನವ ಹಕ್ಕುಗಳ ಆಯೋಗದ ಪಾತ್ರ ಮಹತ್ತರವಾದುದು ಎಂದು ಹೇಳಿದರು.
ಚಿಕ್ಕಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿ, ದೇಶದ ಕಾನೂನು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಿಕೆಯು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಇದರಲ್ಲಿ ಯಾವುದೇ ಚ್ಯುತಿಯಾಗಬಾರದು ಎಂದರು.
ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ವಿಶ್ವನಾಥ್ ಮಾತನಾಡಿ, ರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆ 1993ರ ಅಡಿ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯಾವುದೇ ಖರ್ಚು ಇಲ್ಲದೆ ದೂರು ನೀಡಬಹುದಾಗಿದೆ. ಇದರ ಬಗ್ಗೆ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಕೆಲ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ನೊಂದ ವ್ಯಕ್ತಿಗಳಿಗೆ ನ್ಯಾಯ ಒದಗಿಸುತ್ತದೆ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ತಾಪಂ ಇಒ ಹರ್ಷವರ್ಧನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೌತಾಜ್, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಹಿರಿಯ ವಕೀಲ ಎಚ್.ಆರ್.ವಿಶ್ವನಾಥ್ ಮತ್ತಿತರರು ಇದ್ದರು.