ಹಕ್ಕು ಕಸಿಯಲು ಸಿಎಎ ಜಾರಿ ಮಾಡ್ತಿಲ್ಲ!

DSC_2023
Published on

ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿದೇಶದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮ ಭಾರತೀಯರಿಗೆ ಪೌರತ್ವ ಕೊಡುವುದಕ್ಕೆ ಹೊರತೂ ಯಾರ ಹಕ್ಕು ಕಿತ್ತುಕೊಳ್ಳಲು ಅಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ರಾಷ್ಟ್ರೀಯ ನಾಗರಿಕ ವೇದಿಕೆ ವತಿಯಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ‘ಜಾಗೃತಿ ಜಾಥಾ’ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ದೇಶದ್ರೋಹಿಗಳಿಗೆ ಭಯ ಹುಟ್ಟಿಸಿರುವ ನರೇಂದ್ರಮೋದಿ, ಅಮಿತ್ ಶಾ ನಂತರ ನೂರಾರು ದೇಶಭಕ್ತರು ನಮ್ಮಲ್ಲಿದ್ದಾರೆ. ಹಿಂದು ಸಮಾಜದ ಉಳಿವು ದೇಶದ ಉಳಿವು, ಭಾರತ ಹಿಂದು ರಾಷ್ಟ್ರ ಇದನ್ನು ಒಪ್ಪಿ ಬದುಕುವವರಿಗೆ ಮಾತ್ರ ಇಲ್ಲಿ ಅವಕಾಶ ಎಂದರು. ದೇಶದ ಹೆಣ್ಣು ಮಕ್ಕಳು ಭೋಗದ ವಸ್ತು ಅಲ್ಲ, ಹಸುಗಳು ಆಹಾರವಲ್ಲ, ಪೂಜನೀಯ ಪ್ರಾಣಿ. ಇತರ ಸಮುದಾಯದವರು ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ, ಹಿಂದು ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಚಿಂತಿಸಬೇಕು ಎಂದರು.

ಭಾರತದಲ್ಲಿ ಇತರ ಧರ್ಮದವರು ಸ್ವತಂತ್ರವಾಗಿ ಬದುಕಲು ಸಾಧ್ಯವಿದೆ, ಹಿಂದುಗಳು ತಮ್ಮಅಸ್ತಿತ್ವಕ್ಕಾಗಿ ಹೋರಾಡುವ ಸನ್ನಿವೇಶ ದೇಶದಲ್ಲಿ ಬಂದೊದಗಿದೆ, ಕಸಬ್‌ಗೆ ಮರಣ ದಂಡನೆ ನೀಡಿದಾಗ ಅವನ ಶವ ಪಡೆದು ಮೆರವಣಿಗೆ ನಡೆಸುವಂತಹ ದೇಶದ್ರೋಹಿಗಳು ಇಲ್ಲಿದ್ದಾರೆ ಎಂದರು. ಅಬ್ದುಲ್‌ಕಲಾಂ ಸಂತಾನ ಬರಬೇಕು, ಕಸಬ್, ಭಯೋತ್ಪಾದಕ, ಉಗ್ರನ ಸಂತಾನ ನಮ್ಮ ದೇಶದಲ್ಲಿ ಬೇಡ. ದೇವರು, ಮತದ ಹೆಸರಿನಲ್ಲಿ ಯಾರನ್ನೂ ವಿರೋಧ ಮಾಡುವುದಿಲ್ಲ, ಎಲ್ಲರನ್ನೂ ಅಪ್ಪಿಕೊಳ್ಳುವ ಧರ್ಮ ನಮ್ಮದು. ಹಾಗಾಗಿ, ಪೌರತ್ವ ಕಾಯ್ದೆ ಜಾರಿಯಾಗಲೇಬೇಕು ಎಂದರು. ಸಾಮಾನ್ಯ ಮಾಹಿತಿಯನ್ನಷ್ಟೇ ಕೇಳುತ್ತಾರೆ, ಇದಕ್ಕೆ ಏಕೆ ಆತಂಕ ಪಡಬೇಕು, ಈ ದೇಶದ ಯಾರನ್ನೂ ಓಡಿಸುವುದಿಲ್ಲ. ಪಾಕ್, ಬಾಂಗ್ಲಾ ದೇಶದವರಿಗೆ ಪೌರತ್ವ ಕೊಟ್ಟು ನಮ್ಮ ಒಳಗೆ ಇಟ್ಟುಕೊಳ್ಳುವ ದೊಡ್ಡ ಮನಸ್ಸು ನಮಗಿಲ್ಲ ಎಂದರು.

ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ ಎಷ್ಟೇ ಗಲಾಟೆ ಮಾಡಿ, ವಿರೋಧ ಬಂದರೂ ಕಾಯ್ದೆ ಜಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು. ಇವರಿಗೆ ಬಲವಾಗಿ ನಾವು ನಿಂತುಕೊಳ್ಳೊಣ ಎಂದು ಹೇಳಿದರು. ಹಿರೇಮಠ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾಕಿಸ್ತಾನದ ಜನರು ಆರಾಮವಾಗಿದ್ದಾರೆ, ಅವರ ಪ್ರತಿನಿಧಿಗಳಾಗಿ ನಮ್ಮವರೇ ಇಲ್ಲಿ ವಕಾಲತು ಮಾಡುತ್ತಿದ್ದಾರೆ, ಬಹಿರಂಗದ ವೈರಿಗಳಿಗಳಿಗಿಂತ ಆಂತರಿಕ ವೈರಿಗಳೇ ಅಪಾಯಕಾರಿ ಎಂದರು.ದೇಶದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿರುವುದು ಖಂಡನೀಯ, ಎಲ್ಲರೂ ಸುಖವಾಗಿರಲಿ ಎಂದು ಹಿಂದು ಸಮಾಜದಲ್ಲಿ ಭಾವಿಸುತ್ತೇವೆ, ದೇಶದಲ್ಲಿ ಮೋದಿ ಸಾಕಷ್ಟು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಮಾತನಾಡಿ, ನಮ್ಮ ನೆರೆಯ ದೇಶದಲ್ಲಿ ಶೋಷಣೆ ಅನುಭವಿಸುತ್ತಿರುವ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸಲು ಅಖಂಡ ಭಾರತದಲ್ಲಿ ನಮ್ಮಜತೆಗಿದ್ದವರನ್ನು ರಕ್ಷಿಸುವುದು ನಮ್ಮ ಹೊಣೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ದೇಶದಲ್ಲಿ ಕಾಂಗ್ರೆಸ್, ಎಡಪಕ್ಷಗಳು ದೇಶ ಅಲ್ಪಸಂಖ್ಯಾತರನ್ನು ದಾರಿತಪ್ಪಿಸಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ದೇಶಕ್ಕಾಗಿ ನಾವೆಲ್ಲ ಒಂದಾಗಬೇಕು ಎಂದರು. ವೇದಿಕೆಯಲ್ಲಿ ದೊಡ್ಡಗುಣಿ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀವೀರಬಸವ ಸ್ವಾಮೀಜಿ, ತುಮಕೂರು ಜಿಲ್ಲಾ ಸಂಘಚಾಲಕ ನಾಗೇಂದ್ರಪ್ರಸಾದ್, ರಾಷ್ಟ್ರೀಯ ನಾಗರಿಕ ವೇದಿಕೆ ಅಧ್ಯಕ್ಷ ಕೋರಿ ಮಂಜುನಾಥ್, ಮಹಿಳಾ ಸಮನ್ವಯ ಸಮಿತಿ ಬೌದ್ಧಿಕ್ ಪ್ರಮುಖ ರೂಪಾ ಇದ್ದರು. ಜಾಥದಲ್ಲಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್‌ಗೌಡ ಮತ್ತಿತರರು ಭಾಗಿಯಾದರು.

ಗಮನ ಸೆಳೆದ ಬಾವುಟ: ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬಿಜೆಪಿ, ಆರ್‌ಎಸ್‌ಎಸ್ ಸೇರಿ ವಿವಿಧ ಸಂಘ, ಸಂಸ್ಥೆ ಪದಾಧಿಕಾರಿಗಳು, ಕಾಲೇಜುಗಳ ವಿದ್ಯಾರ್ಥಿ ಜಾಗೃತಿಜಾಥದಲ್ಲಿ ಭಾಗವಹಿಸಿ ದೇಶಾಭಿಮಾನದ ಘೋಷಣೆಗಳನ್ನು ಮೊಳಗಿಸಿದರು.ರಾಷ್ಟ್ರಧ್ವಜ, ಹಿಂದು ಧರ್ಮದ ಪ್ರತೀಕವಾಗಿರುವ ಭಗವಾ ಧ್ವಜ ಕೂಡ ಭಾರಿ ಸಂಖ್ಯೆಯಲ್ಲಿ ಹಾರಾಡಿದವು. ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳು ತಂದಿದ್ದ 100ಮೀ ಉದ್ದದ ಭಾರತದ ಬಾವುಟ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net