ಹಕ್ಕಿಜ್ವರ: ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ

Bird flu
Published on

ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯದ ವಿವಿಧೆಡೆ ಕಾಣಿಸಿಕೊಂಡಿರುವ ಹಕ್ಕಿಜ್ವರ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ವರದಿಯಾಗಿಲ್ಲ. ಆದರೂ ಕಟ್ಟೆಚ್ಚರ ವಹಿಸಲಾಗಿದೆ.

ರಾಯಚೂರಿನ ಮಾನ್ವಿ ತಾಲೂಕು, ಚಿಕ್ಕಬಳ್ಳಾಪುರ ತಾಲೂಕು ಮತ್ತು ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಕಂಡುಬಂದಿದ್ದು, ಹಲವು ಕೋಳಿಗಳು ಮೃತಪಟ್ಟಿವೆ. ಆದರೆ ರಾಜ್ಯದಲ್ಲಿ ಈ ವರೆಗೆ ಮನುಷ್ಯರಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ.

ಜಿಲ್ಲೆಯಲ್ಲಿ ಈ ವರೆಗೆ ಹಕ್ಕಿಜ್ವರದ ಯಾವ ಲಕ್ಷಣವೂ ಕಂಡುಬಂದಿಲ್ಲ. ಆದರೂ ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ ಜಾಗರೂಕವಾಗಿವೆ. ಸೂಕ್ತ ಕ್ರಮ ವಹಿಸಲಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಭಾಗ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ.

ಪಶು ಸಂಗೋಪನಾ ಇಲಾಖೆ ವತಿಯಿಂದ ಜಾಗೃತ ತಂಡ ರಚನೆ ಮಾಡಲಾಗಿದ್ದು, ಕೋಳಿ ಸಾಕಣೆದಾರರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿ ಕೋಳಿ ಸಾಕಣೆ ಕೇಂದ್ರಗಳು, ರೈತರ ಮನೆಗಳು, ಗ್ರಾಮಗಳಿಗೆ ಭೇಟಿ ನೀಡಿ ಕರಪತ್ರ ಹಂಚಿಕೆ ಮಾಡಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಹಕ್ಕಿಗಳು ಅಥವಾ ಕೋಳಿಗಳು ಶಂಕಾಸ್ಪದವಾಗಿ ಸಾವಿಗೀಡಾಗಿರುವುದು ಕಂಡುಬಂದರೆ ತಕ್ಷಣ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತರಬೇಕು ಎಂದು ರೈತರಿಗೆ ತಿಳಿಸಲಾಗಿದೆ. ಹಕ್ಕಿಜ್ವರ ಹರಡುವುದರ ಕುರಿತು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡುತ್ತಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಜಾಗೃತರಾಗಿರುವಂತೆ ತಿಳಿಸಲಾಗುತ್ತಿದೆ.

ಕೋಳಿ ಸಾಗಣೆ ಮಾಡುವ ವಾಹನಗಳಿಗೆ ನಂಜುನಾಶಕಗಳಿಂದ ಶುಚಿಗೊಳಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ.

ಮಾಂಸ ಸೇವನೆಯಿಂದ ಹರಡುವುದಿಲ್ಲ:

ಹಕ್ಕಿಜ್ವರ ಇದ್ದರೂ ಕೋಳಿ ಮಾಂಸ ಸೇವನೆಯಿಂದ ಹರಡುವುದಿಲ್ಲ. ಸೋಂಕು ಕಾಲಿಟ್ಟರೂ ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಮಾಡುವವರಿಗೆ ಮಾತ್ರ ತಗಲುತ್ತದೆ. ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹಕ್ಕಿಗಳಿಂದ ಮಾತ್ರ ಹರಡುತ್ತದೆ. ಆದ್ದರಿಂದ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ಕಿಗಳ ಅಸಹಜ ಸಾವು ಕಂಡಬಂದಲ್ಲಿ ತಕ್ಷಣ ಪಶು ಇಲಾಖೆಗೆ ತಿಳಿಸಬೇಕು. ವ್ಯಾಧಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು, ಕೊಲ್ಲಬಾರದು ಅಥವಾ ಕೈಯಿಂದ ಮುಟ್ಟಬಾರದು. ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರುವುದರಿಂದ ಮಕ್ಕಳನ್ನು ಅಂತಹ ಹಕ್ಕಿಗಳನ್ನು ಸ್ಪರ್ಶ ಮಾಡುವುದಕ್ಕಾಗಲೀ, ಅವುಗಳೊಂದಿಗೆ ಆಟ ಆಡುವುದಕ್ಕಾಲೀ ಅಥವಾ ಸಾಗಿಸುವುದಕ್ಕಾಗಲಿ ಬಿಡಬಾರದು ಎಂದು ಅರಿವು ಮೂಡಿಸಲಾಗುತ್ತಿದೆ.

ಹಕ್ಕಿಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಕೋಳಿಮರಿಗಳನ್ನು ಕೈಗಳಿಂದ ಮುಟ್ಟುವಾಗ ಮೂಗು ಮತ್ತು ಬಾಯಿಗೆ ದಪ್ಪ ಬಟ್ಟೆಯ ಮುಸುಕು ಹಾಕಿಕೊಳ್ಳಬೇಕು. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರಿ ವಹಿಸಬೇಕು.

ರೋಗದ ಲಕ್ಷಣಗಳು ಏನು...?

ಮನುಷ್ಯರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಭೇದಿ, ಹೊಟ್ಟೆನೋವು, ಮೂಗು, ಒಸಡಿನಲ್ಲಿ ರಕ್ತ ಸ್ರಾವ, ಚಳಿಯ ಅನುಭವ, ತಲೆ ನೋವು, ಮೈ-ಕೈ ನೋವು, ಕೆಮ್ಮು, ಉಸಿರಾಟ ತೊಂದರೆ, ಗಂಟಲು ನೋವು, ಕೆಂಗಣ್ಣು ಬಾಧಿಸುತ್ತದೆ. ಕೋಳಿಗಳಲ್ಲಿ ಸೋಂಕಿನ ಲಕ್ಷಣಗಳು ತಕ್ಷಣಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅವು ಬಹುಬೇಗ ಹರಡುವುದರಿಂದ ರೋಗ ಪತ್ತೆ ಕಷ್ಟ.

ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್ ಸಾವು ಕೂಡ ಸಂಭವಿಸುತ್ತದೆ.

ಹಕ್ಕಿ ಜ್ವರ ಹೇಗೆ ಹರಡುತ್ತದೆ?

ವೈರಸ್ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಹಕ್ಕಿಗಳು ವಲಸೆ ಹೋದಾಗ, ಗುಂಪಿನಲ್ಲಿ ಸೋಂಕಿತ ಹಕ್ಕಿ ಇದ್ದರೆ ಹೋದ ಸ್ಥಳದಲ್ಲಿರುವ ಹಕ್ಕಿಗಳಿಗೂ ಸುಲಭವಾಗಿ ಹರಡುತ್ತದೆ. ಸೋಂಕಿತ ಕೋಳಿ ಅಥವಾ ಹಕ್ಕಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದ ಮನುಷ್ಯರು ಮತ್ತು ಪ್ರಾಣಿಗಳಿಗೂ ಸೋಂಕು ಹರಡಬಹುದು. ತೇವ ಅಥವಾ ಒಣಗಿದ ಗೊಬ್ಬರದಲ್ಲಿ 8 ವಾರಗಳವರೆಗೂ ಜೀವಿಸುವ ಸಾಮರ್ಥ್ಯ ಈ ವೈರಸ್‌ಗಿದ್ದು, ಸೋಂಕಿತ ಪಕ್ಷಿ, ಪ್ರಾಣಿಗಳ ನೇರ ಸಂಪರ್ಕಕ್ಕೆ ಬಾರದೇ ಇರುವುದು, ಒಂದು ವೇಳೆ ಬಂದರೆ, ಕೈಯನ್ನು ಸಾಬೂನಿನಿಂದ ತೊಳೆದು ಸ್ವಚ್ಛಗೊಳಿಸುವುದರ ಮೂಲಕ ಈ ವೈರಸ್ ಮನುಷ್ಯನಿಗೆ ಹರಡುವುದನ್ನು ತಡೆಯಬಹುದು.

ವಲಸೆ ಹಕ್ಕಿಗಳ ಮೇಲೆ ನಿಗಾ

ಹಕ್ಕಿಜ್ವರ ತಡೆಗಾಗಿ ವಲಸೆ ಹಕ್ಕಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ರಂಗನತಿಟ್ಟು ಪಕ್ಷಿಧಾಮ, ಮೈಸೂರು ಚಾಮರಾಜೇಂದ್ರ ಮೃಗಾಲಯ, ಕೆರೆಗಳಲ್ಲಿ ನಿಗಾ ವಹಿಸಲಾಗುತ್ತಿದೆ. 2017ರಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ನಗರದ ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗಿತ್ತು. ಇದಾದ ನಂತರ ಹಲವು ಕಟ್ಟೆಚ್ಚರ ವಹಿಸಲಾಗುತ್ತಿದೆ.

ಡಿಸಿ ಅಧ್ಯಕ್ಷತೆ ಸಭೆ:

ಹಕ್ಕಿಜ್ವರ ತಡೆಯುವ ಕುರಿತು ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಮಾ.3ರಂದು ಅಧಿಕಾರಿಗಳ ಸಭೆ ಕರೆಯಲಾಗಿದೆ. ಇಲ್ಲಿ ಸಮಗ್ರವಾಗಿ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ, ಆತಂಕಗೊಳ್ಳುವ ಅಗತ್ಯವಿಲ್ಲ. ಆದಾಗ್ಯೂ, ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕೇರಳ ಗಡಿ ಹಂಚಿಕೊಂಡಿರುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ನಿಗಾ ವಹಿಸಲಾಗಿದೆ. ಡಾ.ನಾಗರಾಜು ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ ----------- ಜಿಲ್ಲೆಯಲ್ಲಿ ಈ ವರೆಗೆ ಹಕ್ಕಿಜ್ವರದ ಯಾವ ಲಕ್ಷಣವೂ ಕಂಡುಬಂದಿಲ್ಲ. ಆದರೂ ಇಲಾಖೆ ಜಾಗರೂಕವಾಗಿದ್ದು, ಜ್ವರ ಕಂಡುಬರುವ ಪ್ರಕರಣಗಳನ್ನು ವರದಿ ಮಾಡುವಂತೆ ಆಯಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಜನರು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ. ಡಾ.ಕುಮಾರಸ್ವಾಮಿ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net