

ಮೈಸೂರು: ಈ ಬಾರಿಯ ನಾಡಹಬ್ಬ ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಚಾಮುಂಡಿಬೆಟ್ಟದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಉದ್ಘಾಟಕರ ಹೆಸರು ಘೋಷಿಸಿದರು.
ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಹಂಸಲೇಖ ಅವರನ್ನು ಉದ್ಘಾಟನೆ ಮಾಡಲು ಆಹ್ವಾನಿಸಲಾಗಿದೆ. ಆಕ್ಟೋಬರ್ 15ರಂದು ಬೆಳಗ್ಗೆ 10.15ರಿಂದ 10.30ರ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಈ ಬಾರಿಯ ದಸರಾ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಸರ್ಕಾರ 100 ದಿನ ಪೂರೈಸಿದ್ದು, ನಮಗೆ ಇದೇನು ಸವಾಲು ಎನ್ನಿಸಲಿಲ್ಲ. ಗ್ಯಾರೆಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇದ್ದು, ಅದನ್ನು ಜಾರಿಗೊಳಿಸಿದ್ದೇವೆ. ಮಾತು ಕೊಟ್ಟಂತೆ ಗ್ಯಾರೆಂಟಿಗಳ ಜಾರಿ ಮಾಡುತ್ತಿದ್ದೇವೆ. ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಖುದ್ದು ಪ್ರಧಾನಮಂತ್ರಿಯೇ ಗ್ಯಾರಂಟಿ ಬಗ್ಗೆ ಆರೋಪ ಮಾಡಿದ್ದರು. ಆದರೆ ಗ್ಯಾರಂಟಿ ಜಾರಿಯಿಂದ ರಾಜ್ಯ ದಿವಾಳಿಯಾಗಿಲ್ಲ. ಎಲ್ಲವನ್ನೂ ಜಾರಿ ಮಾಡುತ್ತಿದ್ದೇವೆ. ಗೃಹಲಕ್ಷ್ಮಿಗೆ ವರ್ಷಕ್ಕೆ 32 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆಗೆ ಇಷ್ಟು ಪ್ರಮಾಣದ ಹಣ ಖರ್ಚಾಗುತ್ತಿರುವುದು ಇದೇ ಮೊದಲು ಎಂದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಸರ್ಕಾರ ನೂರು ದಿನ ಪೂರೈಸಿದ್ದು, ಇದು ನಮಗೆ ಸವಾಲು ಎನಿಸಲಿಲ್ಲ. ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತೆ ಗ್ಯಾರಂಟಿ ಜಾರಿ ಮಾಡುವ ಬದ್ಧತೆ ಇದ್ದುದ್ದರಿಂದ ಅವುಗಳ ಜಾರಿ ಕಠಿಣ ಅನಿಸಲಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಚುನಾವಣಾ ಸಂದರ್ಭದಲ್ಲಿ ಹೇಳಿದ್ದೆವು. ಅದೇ ರೀತಿ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಇಲ್ಲ. ಪಿಎಸ್‌ಐ ಹಗರಣ, ಗುತ್ತಿಗೆದಾರರ ಶೇ 40ರಷ್ಟು ಕಮಿಷನ್ ಆರೋಪ, ಕೊವಿಡ್ ಸಂದರ್ಭದಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಯಾರು ಬೇಕಾದರೂ ತಿಂದುಕೊಂಡು ಹೋಗಲಿ ಎಂದು ಬಿಟ್ಟುಬಿಡಬೇಕಾ. ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ. ಅಧಿಕಾರದಲ್ಲಿದಾಗ ಕೊಳ್ಳೆ ಹೊಡೆದು ಈಗ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ವಿರೋಧ ಪಕ್ಷದವರು ಎಷ್ಟೇ ಆರೋಪ ಮಾಡಿ, ದೂರ ಮಾಡಲು ಯತ್ನಿಸಿದರು. ನಾವು ದಿನದಿಂದ ದಿನಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದೇವೆ. ಹೀಗಾಗಿ ಪ್ರತಿಪಕ್ಷಗಳು ವ್ಯರ್ಥ ಪ್ರಯತ್ನ ಮಾಡುತ್ತಿವೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಮಾತಿಗೆ ಧ್ವನಿಗೂಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ವಿರೋಧ ಪಕ್ಷಗಳು ನಮ್ಮ ಸಂಬಂಧ ಹಾಗೂ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಸದಾ ಒಟ್ಟಿಗೆ ಇರುವುದನ್ನು ಮಾಧ್ಯಮದವರು ನೋಡುತ್ತಲೇ ಇರುತ್ತೀರಿ ಎಂದು ಪ್ರತಿಕ್ರಿಯಿಸಿದರು.
ಚುನಾವಣೆಗೆ ಮುನ್ನ ದಿನ ಮೇ 9 ರಂದು ಚಾಮುಂಡಿ ತಾಯಿಗೆ ಶಕ್ತಿ ಕೊಡು ಎಂದು ಬೇಡಿಕೊಂಡಿದ್ದೆವು. ಅದರಂತೆ ತಾಯಿ ನಮಗೆ ಶಕ್ತಿ ಕೊಟ್ಟಿದ್ದಾಳೆ. ಆದ್ದರಿಂದ ಗೃಹ ಲಕ್ಷ್ಮಿಯೋಜನೆ ಜಾರಿಗೆ ಮುನ್ನ, ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.