ಹಂಪಿಯಲ್ಲಿ ವಾಣಿಜ್ಯ ಚಟುವಟಿಕೆ ಬಂದ್: ಜನತಾ ಪ್ಲಾಟ್ ನಿವಾಸಿಗಳ ಬದುಕು ಅತಂತ್ರ

Untitled design (7)
ಹಂಪಿಯ ಜನಪಾ ಪ್ಲಾಟ್‌ನಲ್ಲಿ ಅಂಗಡಿ- ಮುಂಗಟ್ಟುಗಳಿಗೆ ಹವಾಮಾದಿಂದ ಬೀಗ ಜಡಿದಿದ್ದರಿಂದ ರಸ್ತೆಗಳು ಖಾಲಿ ಖಾಲಿ.
Published on

ಹೊಸಪೇಟೆ: ಇಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ನಿಷಿದ್ಧ. ಕುಡಿವ ನೀರಿನ ಕರ, ವಿದ್ಯುತ್ ಶುಲ್ಕವನ್ನೂ ವಾಣಿಜ್ಯ ದರದಲ್ಲೇ ಪಾವತಿಸಬೇಕು. ಅನಧಿಕೃತ ವಾಣಿಜ್ಯ ಚಟುವಟಿಕೆ ನೆಪದಲ್ಲಿ ಮನೆಗಳ ಕರೆಂಟ್ ಕೂಡಾ ಕಡಿತಗೊಳಿಸಿದ್ದರಿಂದ ಕೆಲ ಕುಟುಂಬಗಳು ಎರಡು ತಿಂಗಳಿಂದ ಕತ್ತಲ್ಲಲ್ಲೇ ದಿನ ದೂಡುತ್ತಿವೆ.


ಸರ್ಕಾರದ ದ್ವಂದ್ವ ನಿಲುವಿಗೆ ವಿಶ್ವವಿಖ್ಯಾತ ಹಂಪಿ ನೆಲದ ನಿವಾಸಿಗಳು ಗುರಿಯಾಗಿದ್ದಾರೆ. ಹಂಪಿ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯ ಹಂಪಿ, ಕಡ್ಡಿರಾಂಪುರ, ಕಮಲಾಪುರ ಹಾಗೂ ವೆಂಕಟಾಪುರ ಭಾಗದಲ್ಲಿ ಕಳೆದ ಜೂನ್‌ನಲ್ಲಿ ಅನಧಿಕೃತ ಹೋಮ್ ಸ್ಟೇಗಳನ್ನು ನೆಲಸಮಗೊಳಿಸಲಾಗಿದೆ. ಆ ಪೈಕಿ ಹಂಪಿ ಜನತಾ ಪ್ಲಾಟ್ ಜನರ ಬದುಕನ್ನು ಮತ್ತಷ್ಟು ದುರ್ಬಲಗೊಳಿಸಿದೆ.


ಆರ್ಥಿಕ ಸಂಕಷ್ಟ: ಹಂಪಿಯ ಜನತಾ ಪ್ಲಾಟ್‌ನಲ್ಲಿ 180ಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಮನೆಗಳಲ್ಲಿ ಒಂದೆರಡು ರೂಮ್‌ಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಕಿರಾಣಿ ಅಂಗಡಿ, ಚಹಾ ಮತ್ತು ಬೀದಿಬದಿಯಲ್ಲಿ ಸಣ್ಣ ಪುಟ್ಟ ಹೋಟೆಲ್‌ಗಳು ನಡೆಯುತ್ತಿದ್ದವು. ಅದರಿಂದ ಬರುವ ಆದಾಯದಲ್ಲೇ ನಿತ್ಯ ಜೀವನ ಸಾಗಿಸುತ್ತಿದ್ದರು.

ಆದರೆ, ಹಂಪಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿರುವ ಹಿನ್ನೆಲೆಯಲ್ಲಿ ಜೂ.19 ರಂದು ಹಂಪಿ ಭಾಗದ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಮನೆಯ ಒಂದೆರಡು ಕೊಠಡಿಗಳನ್ನು ಹೊರತುಪಡಿಸಿ, ಇನ್ನುಳಿದ ಕೋಣೆಗಳಿಗೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.

ಇದರಿಂದಾಗಿ ಎರಡು ತಿಂಗಳಿಂದ ದುಡಿಮೆ ಕಳೆದುಕೊಂಡಿದ್ದು, ಮಕ್ಕಳ ಶಾಲಾ- ಕಾಲೇಜು ಶುಲ್ಕ ಪಾವತಿಸಲಾಗುತ್ತಿಲ್ಲ. ಹಿರಿಯರು ಅನಾರೋಗ್ಯಕ್ಕೀಡಾದರೆ ಚಿಕಿತ್ಸೆ ಕೊಡಿಸಲು ಹಣಕಾಸಿನ ಸಮಸ್ಯೆಯಾಗುತ್ತಿದೆ ಎಂದು ಜನತಾ ಪ್ಲಾಟ್‌ನ ಮಹಿಳೆಯರು ಕಣ್ಣೀರುಡುತ್ತಿದ್ದಾರೆ.

ವಿದ್ಯುತ್ ಸಂಪರ್ಕವೂ ಕಡಿತ

ಅನಧಿಕೃತ ಚಟುವಟಿಕೆ ನೆಪದಲ್ಲಿ ಹಂಪಿ ಜನತಾ ಪ್ಲಾಟ್‌ನ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಜನರು ಪರದಾಡುವಂತಾಗಿದೆ. ಶಾಲಾ- ಕಾಲೇಜು ಮಕ್ಕಳು ಬೀದಿ ದೀಪಗಳಡಿ ಕುಳಿತು ಅಭ್ಯಾಸ ಮಾಡುವಂತಾಗಿದೆ. ಅಕ್ಕಪಕ್ಕದ ಮನೆಗಳಲ್ಲಿ ಚಾರ್ಜಿಂಗ್ ಮಾಡಿದ ಲೈಟ್ ಬೆಳಕಿನಲ್ಲೇ ರಾತ್ರಿ ಕಳೆಯುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಕಾರಣವೇನು ?

ಹಂಪಿ ಜನತಾ ಪ್ಲಾಟ್‌ನಲ್ಲಿ ಜನರು ಕೆಲ ದಶಕಗಳಿಂದ ನೆಲೆಸಿದ್ದಾರೆ. ಸಣ್ಣಪುಟ್ಟ ವ್ಯಾಪಾರದಲ್ಲಿ ಜೀವನ ಕಂಡುಕೊಂಡಿದ್ದರು. ಆದರೆ, ಹಂಪಿಯಲ್ಲಿ ನಡೆಯುತ್ತಿರುವ ಅನಧಿಕೃತ, ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಕೋರಿ ದಶಕದ ಹಿಂದೆ ಕೊಟ್ಟೂರು ಕಲ್ಯಾಣ ಕೇಂದ್ರದಿಂದ ಹೈಕೋರ್ಟ್‌ಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು

. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹಂಪಿಯಲ್ಲಿ ಅನಧಿಕೃತ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರಾಧಿಕಾರ, ಮೊದಲು ವಾಣಿಜ್ಯ ವಹಿವಾಟುಗಳಿಗೆ ಕಡಿವಾಣ ಹಾಕಿತ್ತು. ಆನಂತರ ಮತ್ತೆ ಅಕ್ರಮದ ಆರೋಪಗಳು ಕೇಳಿ ಬಂದಿತ್ತು.

ಅಧಿಕಾರಿಗಳು ಹಂಪಿಯಿಂದ ಒಕ್ಕಲೆಬ್ಬೆಸುವ ಭಯದಿಂದ ಜನತಾ ಪ್ಲಾಟ್ ನಿವಾಸಿಗಳು ವಾಣಿಜ್ಯ ಚಟುವಟಿಕೆ ನಡೆಸುವುದಿಲ್ಲ ಎಂದು ಆರೇಳು ವರ್ಷಗಳ ಹಿಂದೆಯೇ ಕೋರ್ಟಿಗೆ ಮುಚ್ಚಳಿಕೆ ಪತ್ರ ಸಲ್ಲಿಸಿದ್ದರು.

ಅದನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹವಾಮಾ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರಾಗಲು ಸ್ಥಳೀಯ ಜಿಲ್ಲಾಡಳಿತ, ಪ್ರಾಧಿಕಾರ, ಹಂಪಿ ವ್ಯಾಪ್ತಿಯಲ್ಲಿದ್ದ ಅನಧಿಕೃತ ಹೋಟೆಲ್, ಹೋಮ್ ಸ್ಟೇಗಳಿಗೆ ಬೀಗ ಮುದ್ರೆ ಹಾಕಿದರು. ಇದರಿಂದಾಗಿ ಎರಡು ತಿಂಗಳಿಂದ ಜನತಾ ಪ್ಲಾಟ್ ನಿವಾಸಿಗಳ ಬದುಕು ದುಸ್ತರವಾಗಿದೆ.

ಹಂಪಿಯಲ್ಲಿ ಅನಧಿಕೃತ ಹೋಟೆಲ್, ಹೋಮ್ ಸ್ಟೇಗಳ ತೆರವು ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೋರ್ಟ್ ಕೂಡ ಹಲವು ಮಧ್ಯಂತರ ಆದೇಶಗಳನ್ನು ನೀಡಿದೆ. ಮುಂದೆ ಕೋರ್ಟ್ ಆದೇಶದನ್ವಯ ಸರ್ಕಾರ ಕ್ರಮ ಕೈಗೊಳ್ಳಲಿದೆ.ಎಂ.ಪಿ.ಮಾರುತಿ,ಆಯುಕ್ತ, ಹಂಪಿ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ, ಹಂಪಿ ಎರಡು ತಿಂಗಳಿಂದ ಜೈಲಿನಲ್ಲಿರುವಂತಾಗಿದೆ. ಎಲ್ಲೋ ಆಗಿರುವ ಅಕ್ರಮ ಚಟುಕವಟಿಕೆಗಳನ್ನು ಹಂಪಿಯವರ ಮೇಲೆ ಹೊರಿಸುತ್ತಿರುವುದು ಸರಿಯಲ್ಲ. ಇಲ್ಲಿ ಅಂತಹ ಚಟುವಟಿಕೆಗಳು ನಡೆದಿದ್ದರೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಷ್ಟು ಪ್ರರಕರಣ ದಖಲಾಗಿವೆ ಎಂಬುದನ್ನು ಪರಿಶೀಲಿಸಬೇಕು. ಕೋರ್ಟ್ ಆದೇಶ ಬರುವವರೆಗೆ ಹೋಟೆಲ್, ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು.ಹಂಪಮ್ಮ,ಹಂಪಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net