ಹಂಪಿ ಉತ್ಸವ ಮಾದರಿಯಲ್ಲಿ ನಂದಿಯಲ್ಲಿ ಶಿವೋತ್ಸವ: ಸಚಿವ ಡಾ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

23 CBP 5
Published on

ಚಿಕ್ಕಬಳ್ಳಾಪುರ: ಮೈಸೂರು ದಸರಾ ಹಾಗೂ ಹಂಪಿ ಉತ್ಸವ ಮಾದರಿಯಲ್ಲಿ ತಾಲೂಕಿನ ನಂದಿಯಲ್ಲಿ ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ನಂದಿಯ ಭೋಗ ನಂದೀಶ್ವರ ಜಾತ್ರೆ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ರಾಜ್ಯಮಟ್ಟದ ಶಿವೋತ್ಸವ ಆಚರಣೆ ಬಗ್ಗೆ ಚರ್ಚಿಸಲಾಯಿತು.

ನಂದಿಯಲ್ಲಿ ಶಿವರಾತ್ರಿ ದಿನದಂದು ಶಿವೋತ್ಸವವನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೈಸೂರು ದಸರಾ ಹಾಗೂ ಹಂಪಿ ಉತ್ಸವದ ಮಾದರಿಯಲ್ಲಿ ಆಚರಿಸಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮಾ.1ರಂದು ಸಂಜೆ 6ರಿಂದ ಪ್ರಾರಂಭವಾಗಿ ರಾತ್ರಿಯಿಡೀ ಕಾರ್ಯಕ್ರಮ ನಡೆಯಲಿದ್ದು, ಸರಿಗಮಪ ಖ್ಯಾತಿಯ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಹಾಸ್ಯ ಕಲಾವಿದರಿಂದ ನಗೆ ಹಬ್ಬ, ಕೇರಳದ ತಂಡದಿಂದ ಚಂಡೆ ವಾದನ, ಹರಿಕಥೆ, ಭಜನೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದೇ ವೇಳೆ ಸ್ಥಳೀಯ ಕಲೆಗಳನ್ನು ಪ್ರೋತ್ಸಾಹಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಭೋಗ ನಂದೀಶ್ವರಸ್ವಾಮಿ ದೇವಸ್ಥಾನವು ಕಲೆ ಮತ್ತು ವಾಸ್ತು ಶಿಲ್ಪದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಇಲ್ಲಿನ ಜಾತ್ರೆಯನ್ನು ಸಡಗರದಿಂದ ಆಚರಿಸಬೇಕು. ಇದರ ಭಾಗವಾಗಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಮತ್ತಿತರರು ಇದ್ದರು.

ವಿವಿಧ ಸಮಿತಿಗಳ ರಚನೆ: ಆಹಾರ, ಪ್ರಚಾರ, ಹೂವು ಮತ್ತು ದೀಪಾಂಕಾರ, ಸನ್ಮಾನ, ಹೆಲ್ಪ್ ಡೆಸ್ಕ್, ಸಾರಿಗೆ ವ್ಯವಸ್ಥೆ, ವೇದಿಕೆ ಸಿದ್ಧತೆಗಾಗಿ ವಿವಿಧ ಸಮಿತಿ ರಚಿಸಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಜಾತ್ರೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಅನ್ನ ಸಂತರ್ಪಣೆ, ಸ್ವಚ್ಛತೆ ನಿರ್ವಹಣೆ, ಜಾತ್ರೆಗೆ ಹೆಚ್ಚಿನ ಬಸ್ ಸೌಕರ್ಯ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರದರ್ಶನ, ವಿವಿಧ ಮಹಿಳಾ ಸ್ವಸಹಾಯ ಸಂಘಗಳ ತಯಾರಿಕೆಯ ಆಹಾರೋತ್ಪನ್ನಗಳ ಮಳಿಗೆಗಳ ಸ್ಥಾಪನೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಪಂ ವಾರು ಸಭೆ: ಇದೇ ಮೊದಲ ಬಾರಿಗೆ ಭೋಗನಂದೀಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸಚಿವ ಡಾ ಕೆ.ಸುಧಾಕರ್ ಗ್ರಾಪಂ ವಾರು ನಾಯಕರ ಸಭೆ ಕರೆದು, ಶಿವರಾತ್ರಿ ಹಬ್ಬದ ಆಚರಣೆ ಬಗ್ಗೆ ಚರ್ಚಿಸಿದರು. ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಹಕಾರ ನೀಡಲು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಜಿ.ಆರ್.ಶ್ರೀನಿವಾಸ್, ಜೆಸಿಬಿ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net