

ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಒಡಲು ತುಂಬಿ ಹರಿಯುತ್ತಿರುವ ತಾಲೂಕಿನ ಮಣಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂದಿನಕೆರೆ - ಹರಳಹಳ್ಳಿ ಕೆರೆಗೆ ಶಾಸಕ ಸ್ವರೂಪ್ ಪ್ರಕಾಶ್ ಶನಿವಾರ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಣೆಗೂ ಮುನ್ನ ಗ್ರಾಮದ ಕೆರೆ ದಡದಲ್ಲಿ ಇರುವ ಈಶ್ವರ ದೇವಾಲಯದಲ್ಲಿ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾತ್ ನೀಡಿದರು.
ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಅದೇ ರೀತಿ ಮಲೆನಾಡು ಭಾಗದಲ್ಲಿ ಸಾಕಷ್ಟು ಹಾನಿಯೂ ಆಗಿದ್ದು, ಅದೃಷ್ಟವಶಾತ್ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದರು.
ಭಾರಿ ಮಳೆಯಿಂದ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ಇಂದು ಹಂದಿನಕೆರೆ - ಹರಳಹಳ್ಳಿಗೆ ಸೇರಿದ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೂಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ರೈತರು ಸಮೃದ್ಧಿಯಾಗಿ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಹರಳಹಳ್ಳಿ ಗ್ರಾಂ.ಪ ಪಿಡಿಓ ರಂಗಸ್ವಾಮಿ, ವಿ.ಎ ಶ್ರೀನಿವಾಸ್, ಇಂಜಿನಿಯರ್ ರುಕ್ಮಾಂಗದ , ನಾಗರಾಜ್ ಹಾಗೂ ಗ್ರಾಮದ ಮುಖಂಡರಾದ ರಂಗರಾಜು, ಮಂಜುನಾಥ್, ವಿಠಲ್,ಹರೀಶ್, ರಮೇಶ್ ಭೂದೇಶ್, ಇತರರು ಇದ್ದರು.