ಹಂದಿಗಳ ಹಾವಳಿಗೆ ರೈತ ಕಂಗಾಲು

07-Bpt-01
Published on

ಬಂಗಾರಪೇಟೆ: ಕರೊನಾದಿಂದ ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿರುವುದು ಒಂದಡೆಯಾದರೆ ಇನ್ನೊಂದೆಡೆ ಕಾಡಿನಿಂದ ಬಂದ ಹಂದಿಗಳು ತೋಟಗಳಿಗೆ ನುಗ್ಗಿ ಫಸಲು ಹಾಳು ಮಾಡಿ ರೈತರನ್ನು ಕಂಗಾಲಾಗಿಸಿವೆ.

ತಾಲೂಕಿನ ಅನಿಗಾನಹಳ್ಳಿಯ ಗೋಪಾಲಪ್ಪ ಎಂಬುವವರ 1.5 ಎಕರೆ ಜಮೀನಿನಲ್ಲಿ ಬೆಳೆದಿರುವ ಟೊಮ್ಯಾಟೊ ಬೆಳೆಯನ್ನು ಸಂಪೂರ್ಣವಾಗಿ ಹಂದಿಗಳು ನಾಶಪಡಿಸಿವೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಗೋಪಾಲಪ್ಪ ಅಳಲು ತೊಡಿಕೊಂಡಿದ್ದಾರೆ.

ಲಕ್ಷಾಂತರ ರೂ. ಬಂಡವಾಳ ಹಾಕಿ ಹಗಲಿರುಳೆನ್ನದೆ ತೋಟವನ್ನು ರಕ್ಷಿಸುತ್ತಿರುವ ರೈತರಿಗೆ ರಾತ್ರಿ ಸಮಯದಲ್ಲಿ ಹಂದಿಗಳ ಹಾವಳಿಯಿಂದ ತೋಟಕ್ಕೆ ನೀರು ಬಿಡಲು ಹೋಗಲೂ ಭಯವಾಗುತ್ತಿದೆ.

ಈ ಹಿಂದೆ ಹಂದಿಗಳ ಹಾವಳಿ ಹೆಚ್ಚಾದಾಗ ಕೇಫ್(ನಾಡ ಬಾಂಬು)ಗಳನ್ನು ಉಂಡೆಗಳನ್ನಾಗಿ ಮಾಂಸದೊಂದಿಗೆ ಬೆರೆಸಿ ತೋಟದಲ್ಲಿ ಅಲ್ಲಲ್ಲಿ ಹಾಕಲಾಗುತ್ತಿತ್ತು. ಅದನ್ನು ತಿಂದ ಹಂದಿಗಳು ಅಲ್ಲೇ ಸಾಯುತ್ತಿದ್ದವು, ಉಳಿದ ಹಂದಿಗಳು ಫಲಾಯನ ಮಾಡುತ್ತಿದವು. ಆದರೆ ಈಗ ಸರ್ಕಾರಿ ನಿಯಮಾನುಸಾರ ಕೇಫುಗಳನ್ನು ಬಳಸುವಂತಿಲ್ಲ, ಇತ್ತ ಬೆಳೆ ರಕ್ಷಣೆ ಮಾಡಲೂ ಆಗುತ್ತಿಲ್ಲ.

ವಿಮೆ ಕಂಪನಿಗಳು ಕೇವಲ ಲಾಭದಾಯಕ ಅಥವಾ ಸುರಕ್ಷಿತ ಬೆಳೆಗಳಿಗ ಮಾತ್ರ ವಿಮೆ ಮಾಡಿಸುತ್ತಿವೆ. ಟೊಮ್ಯಾಟೊ ಬೆಳೆಗೆ ವಿಮೆ ಮಾಡುತ್ತಿಲ್ಲ, ಹಂದಿಗಳಿಂದ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಬಗ್ಗೆ ಪಿಡಿಒ ವಿ.ಚಿತ್ರಾ ಅವರನ್ನು ಸಂಪರ್ಕಿಸಲು ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net