

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕೆ.ಕಣಬೂರು ಗ್ರಾಮದಲ್ಲಿ ಕಾಡು ಹಂದಿಗಳ ಹಿಂಡು ರಾತ್ರಿ ಸಮಯದಲ್ಲಿ ಅಡಕೆ ತೋಟಗಳಿಗೆ ನುಗ್ಗಿ 2 ರಿಂದ 4 ವರ್ಷದ ಅಡಕೆ ಗಿಡಗಳನ್ನು ಬುಡಸಮೇತ ಕಿತ್ತು ಹಾಕುತ್ತಿವೆ.
ಕೆ.ಕಣಬೂರು ಗ್ರಾಮದ ಕೊರಲಕೊಪ್ಪ ರೈತರಾದ ನಾಗೇಂದ್ರ, ಮೋಹನ್ ಗೌಡ, ಶ್ರೀಪಾಲ, ತಮ್ಮಣ್ಣ ಗೌಡ ಅವರ ತೋಟಗಳಿಗೆ ಎರಡು ದಿನಗಳಿಂದ ಹಂದಿಗಳ ಹಿಂಡು ನುಗ್ಗಿ ಅಡಕೆ ಗಿಡಗಳನ್ನು ನಾಶಮಾಡುತ್ತಿವೆ. ಕಾಡಾನೆಗಳ ಹಾವಳಿಯಿಂದ ನೆಮ್ಮದಿ ಕಳೆದುಕೊಂಡಿದ್ದ ರೈತರಿಗೆ ಈಗ ಹಂದಿಗಳ ಕಾಟದಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ.
ನಾಗೇಂದ್ರ ಅವರ ತೋಟಕ್ಕೆ ನುಗ್ಗಿದ್ದ ಹಂದಿಗಳು 125 ಅಡಕೆ ಗಿಡಗಳನ್ನು ಕಿತ್ತು ಹಾಕಿವೆ. ಮೋಹನ್ ಗೌಡ ಅವರ ತೋಟದಲ್ಲೂ ಹತ್ತಾರು ಅಡಕೆ ಗಿಡಗಳನ್ನು ಉರುಳಿಸಿವೆ. ಶ್ರೀಪಾದ ಎಂಬುವರ ತೋಟದಲ್ಲಿ 20 ಅಡಕೆ ಗಿಡಗಳು, ತಮ್ಮಣ್ಣ ಅವರ ತೋಟದಲ್ಲಿ 15 ಗಿಡಗಳನ್ನು ನೆಲಕ್ಕುರುಳಿಸಿವೆ.
5 ವರ್ಷದಿಂದ ಅಡಕೆ ಗಿಡಗಳನ್ನು ಬೆಳೆಸಿದ್ದೇವೆ. ಕೇವಲ ಎರಡು ದಿನದಲ್ಲಿ ಹಂದಿಗಳು ಅಡಕೆ ಗಿಡಗಳನ್ನು ಬುಡಸಮೇತ ಉರುಳಿಸಿವೆ. ಮತ್ತೆ ಅಡಕೆ ಸಸಿಗಳನ್ನು ಬೆಳೆಯಬೇಕಾದರೆ ವರ್ಷಗಳೇ ಕಾಯಬೇಕು. ಆದ್ದರಿಂದ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ತೋಟಗಳನ್ನು ಉಳಿಸಿಕೊಡಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ನಾಗೇಂದ್ರ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತೋಟಕ್ಕೆ ಭೇಟಿ ನೀಡಿ ಹಾನಿಗೊಂಡ ಅಡಕೆ ಗಿಡಗಳನ್ನು ವೀಕ್ಷಣೆ ಮಾಡಿದರು.