

ಮೂಡಲಗಿ, ಬೆಳಗಾವಿ: ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಕೂಡಲೇ ಸ್ಥಳಾಂತರಿಸಬೇಕು ಹಾಗೂ ಪಟ್ಟಣ ಅಭಿವೃದ್ಧಿ ಮಾಡಬೇಕು, ಬಾವಿಯನ್ನು ಮುಚ್ಚಬೇಕು, ಅತಿಕ್ರಮಣಗೊಂಡ ಪುರಸಭೆ ಜಾಗವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ ಸಾರ್ವಜನಿಕರು ಧರಣಿ ನಡೆಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಸರ್ವ ಸಾಧಾರಣ ಸಭೆ ಜರುಗುವ ವೇಳೆ ಪ್ರತಿಭಟನೆ ಕೈಗೊಂಡಿದ್ದ ಸಾರ್ವಜನಿಕರು ಕೆಲಕಾಲ ಪುಸರಭೆ ಸದಸ್ಯರ ಜತೆಗೆ ವಾಗ್ವಾದಕ್ಕಿಳಿದರು. ಲಕ್ಷ್ಮೀ ನಗರದ ಪುಠಾಣಿ ಪ್ಲಾಟ್‌ನಲ್ಲಿರುವ ಬಾವಿಯನ್ನು ಮುಚ್ಚುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸಭೆಯಲ್ಲಿ ಬಾವಿ ಮುಚ್ಚುವಂತೆ ಠರಾವು ಪ್ರತಿ ನೀಡಿ ಎಂದು ಮುಖ್ಯಾಧಿಕಾರಿ ದೀಪಕ್ ಹರ್ದಿಗೆ ಮಹಿಳೆಯರು ಆಗ್ರಹಿಸಿದರು. ಹಂದಿಗಳಿಂದ ಬೆಳೆಗಳಿಗೆ ಹಾಗೂ ಮಾನವರಿಗೆ ಹಾನಿಯಾಗಿರುವ ಕುರಿತು ವಿಡಿಯೋ ಮತ್ತು ೆಟೋ ತೋರಿಸಿದರು.
ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಹಂದಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿದ ಪಿಎಸ್‌ಐ ಎಚ್.ವೈ. ಬಾಲದಂಡಿ ಸಾರ್ವಜನಿಕರ ಮನವೊಲಿಸಿ, ಅಧಿಕಾರಿಗಳಿಗೆ ಹಂದಿಗಳ ಸಮಸ್ಯೆ ಕುರಿತು ವಿವರಿಸಿದರು. ಆಗ ಅಧಿಕಾರಿಗಳು ವಾರದೊಳಗಾಗಿ ಸ್ಥಳಾಂತರಿಸುವ ಭರವಸೆ ನೀಡಿದರು. ಆಗ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು, ವಾರದೊಳಗೆ ಸ್ಥಳಾಂತರಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಮಲ್ಲಪ್ಪ ಮದುಕುನುಕಿ, ಈರಪ್ಪ ಢವಳೇಶ್ವರ, ಗುರುನಾಥ ಗಂಗಣ್ಣವರ, ಶ್ರೀಶೈಲ ಜೈನಾಪುರ, ಯಲ್ಲಪ್ಪ ಸಣ್ಣಕ್ಕಿ, ಮಹಾಂತೇಶ ಕಲ್ಲೋಳ್ಳಿ, ಅಮೃತ ನಾಶಿ, ಲಕ್ಷ್ಮೀ ಕಟಗೇರಿ ಇದ್ದರು.