

ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮಣ್ಣು ಪಾಲು ಮಾಡಿ ಅನುದಾನ ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡ ವರದಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಸಿಇಒ ರಿಷಿ ಆನಂದ ತಿಳಿಸಿದ್ದಾರೆ.
ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡ ನೀರು ಶುದ್ಧೀಕರಿಸುವ ಕಾಮಗಾರಿ, ಉದ್ಯಾನ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಥಾನಿಕ ಚೌಕಾಶಿ ನಡೆಸಲಾಗಿ ಕಳಪೆ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಅಲ್ಲದೇ, ಕಾಮಗಾರಿ ಮಾಡದೇ ಬಿಲ್ ತೆಗೆದಿರುವುದು ಕಂಡು ಬಂದಿತ್ತು. ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಇದರಿಂದ ಅಸಹನೀಯಗೊಂಡಿದ್ದ ಪಿಡಿಒ ವಿರೂಪಾಕ್ಷಿ ನಾಡಗೌಡ ಕೆಂಡಾಮಂಡಲವಾಗಿದ್ದರಲ್ಲದೇ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಮಾತನಾಡಿದ್ದರು.
ಈ ಬಗ್ಗೆ ಜನಸಾಮಾನ್ಯರನ್ನು ಎಚ್ಚರಿಸುವ ಮತ್ತು ಮೇಲಾಧಿಕಾರಿಗಳ ಗಮನ ಸೆಳೆಯಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ ವರ್ಗ ಕಾಮಗಾರಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗಿರುವುದು ಗ್ರಾಮಸ್ಥರ ಪಾಲಿನ ಸಮಾಧಾನಕರ ಸಂಗತಿ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಪಂ ಸಿಇಒ ರಿಷಿ ಆನಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸಿಂದಗಿ ತಾಪಂ ಇಒ ರಾಮು ಜಿ ಅಗ್ನಿ ನೇತೃತ್ವದ ಅಧಿಕಾರಿಗಳ ತಂಡ ಹಂದಿಗನೂರ ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ಕಾಮಗಾರಿ ಮತ್ತು ದಾಖಲೆಗಳನ್ನು ಪರಿಶೀಲಿಸಿತು.
ದ್ರವ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕಾಮಗಾರಿ ಭೌತಿಕ ಸ್ಥಳ ಪರಿಶೀಲನೆ ಮಾಡಿದರಲ್ಲದೇ ಅದರ ಫೋಟೋ ಮತ್ತು ಮಾಹಿತಿ ಕಲೆ ಹಾಕಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿ. ವೈ. ಮುರಾಳ ರವರು ಕಾಮಗಾರಿಯ ಕಡತ ಪರಿಶೀಲನೆ ಮಾಡಿ ಅದರಲ್ಲಿ ಲೋಪ ದೋಷಗಳಿದ್ದರೆ ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮತ್ತು ನರೇಗಾ ಅಡಿ ನಿರ್ಮಾಣವಾದ ಪ್ರೌಢ ಶಾಲಾ ಆಟದ ಮೈದಾನ ಅಭಿವೃದ್ಧಿ ಭೌತಿಕ ಸ್ಥಳ ಪರಿಶೀಲನೆ ಮಾಡಿದರು. ಈ ಕಾಮಗಾರಿಯ ಕಡತ ಪರಿಶೀಲನೆ ಮಾಡಿದರು.
ಸಹಾಯಕ ನಿರ್ದೇಶಕರುನಿತ್ಯಾನಂದ ಯಲಗೋಡ, ಎ.ಎ. ದುರ್ಗದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಾದ
ವಸಂತ ಅಮೀನಗಡ ಹಾಗೂ ವಿರುಪಾಕ್ಷಿ ನಾಡಗೌಡ ಮತ್ತಿತರರಿದ್ದರು.