ಹಂದಿ, ಮಿದುಳು ಜ್ವರ ತಡೆಗಟ್ಟಲು ಸ್ವಚ್ಛತೆಗೆ ಒತ್ತು ನೀಡಿ

24blrp1
ಹಂದಿ ಹಾಗೂ ಮೆದುಳು ಜ್ವರ ಹರಡುವುದನ್ನು ತಡೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿದರು.
Published on

ಬೇಲೂರು: ತಾಲೂಕಿನಲ್ಲಿ ಹಂದಿ ಹಾಗೂ ಮಿದುಳು ಜ್ವರ ಹರಡುವುದನ್ನು ತಡೆ ಗಟ್ಟುವುದಕ್ಕಾಗಿ ಶಾಲಾ, ಕಾಲೇಜುಗಳ ಸುತ್ತಮುತ್ತ ಹಾಗೂ ಎಲ್ಲ ಗ್ರಾಮಗಳ ಸಮೀಪದಲ್ಲೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಹೇಳಿದರು.

ಪಟ್ಟಣದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಮಿದುಳು ಜ್ವರ ನಿಯಂತ್ರಣದ ಬಗ್ಗೆ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಇಲ್ಲಿಯವರೆಗೂ ಮಿದುಳು ಜ್ವರದ ಲಕ್ಷಣ ಕಂಡುಬಂದಿಲ್ಲ. ಹಂದಿಯ ಮೇಲೆ ಸೊಳ್ಳೆಗಳು ಕುಳಿತು, ನಂತರ ಆ ಸೊಳ್ಳೆಗಳು ಮಕ್ಕಳು ಹಾಗೂ ಇತರರ ಮೇಲೆ ಕುಳಿತು ಕಡಿದರೆ ಮಿದುಳು ಜ್ವರ ಬರುತ್ತದೆ. ಜ್ವರವು ಬರುವ ಮೊದಲು ಕುತ್ತಿಗೆ ನೋವು, ದೇಹಾಲಸ್ಯ, ಆಯಾಸ, ಸುಸ್ತಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಹಂದಿಗಳ ಸಾಕಣೆ ಕೇಂದ್ರವನ್ನು ಪಟ್ಟಣ ಪ್ರದೇಶದಿಂದ 3 ಕಿ.ಮೀ. ದೂರದಲ್ಲಿರಿಸಬೇಕು ಎಂದರು.

ಈ ರೋಗವು 1 ರಿಂದ 15 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಂದಿ ಸಾಕಣೆ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಮನೆಗಳಲ್ಲಿ ಸೊಳ್ಳೆ ಪರದೆ ಉಪಯೋಗಿಸಬೇಕು, ಇದರ ಬಗ್ಗೆ ಜಾಗೃತಿ ಇಲ್ಲದಿದ್ದರೆ ಅಂಗವಿಕಲರಾಗುವ ಸಂಭವ ಬರಬಹುದು ಎಂದು ಎಚ್ಚರಿಕೆ ನೀಡಿದರು.

ಆರೋಗ್ಯ ಇಲಾಖೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸರ್ಕಾರಿ ಆಸ್ಪತ್ರೆಯ ಆಶಾ, ಅಂಗನವಾಡಿ ಕಾರ್ಯಕರ್ತರು ಕೆಲಸ ಮಾಡುತಿದ್ದಾರೆ. ಸರ್ಕಾರದಿಂದಲೇ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಆಯಾ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲು ಆದೇಶಿಸಿದೆ. ಈ ಕಾರ್ಯಕ್ರಮ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ನಡೆಯುತ್ತಿದ್ದು ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಲಸಿಕಾ ಕಾರ್ಯಕ್ರಮದ ದಿನಾಂಕವನ್ನು ನೀಡಲಾಗುತ್ತದೆ ಎಂದರು.

ಹಿರಿಯ ಆರೋಗ್ಯ ಸಹಾಯಕಿ ಉಷಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ದಯಾನಂದ್, ಉಪ ತಹಸೀಲ್ದಾರ್ ಅಶೋಕ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಈಸಿಒ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಕಿ ಮಂಗಳಮ್ಮ, ತಾಲೂಕು ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net