

ದಾಂಡೇಲಿ: ಹಾಥರಸ್ನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬ್ಲಾಕ್ ಕ್ರಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶೈಲೇಶ ಪರಮಾನಂದ ಮುಖಾಂತರ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ದಾಂಡೇಲಿ ಬ್ಲಾಕ್ ಕ್ರಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ತಂಗಳ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಹಾಗೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಆದಂ ದೇಸೂರ, ನಂದೀಶ ಮುಂಗರವಾಡಿ, ಸಂಜಯ ನಂದ್ಯಾಳಕರ್, ಸರಸ್ವತಿ ರಜಪೂತ, ರೇಣುಕಾ ಬಾಗಡೆ, ಪ್ರೀತಿ ಉದಯ ನಾಯರ್, ಅನಿಲ ನಾಯ್ಕರ್, ಶಿಲ್ಪಾ ಕೊಡೆ, ಸಪೂರಾ ಯರಗಟ್ಟಿ, ಸುಧಾ ರಾಮಲಿಂಗ ಜಾಧವ, ರುಹೀನಾ ಖತೀಬ್, ಮೌಲಾಲಿ ಮುಲ್ಲಾ, ಶಾಹಿದಾ ಪಠಾಣ, ಜಾಫರ್ ಮಸಣಿಕಟ್ಟಿ, ರುಪೇಶ ಪವಾರ, ರೇಣುಕಾ ಬಂದಂ, ದಿವಾಕರ ನಾಯ್ಕ ಇತರರು ಇದ್ದರು.
ಕೋಮು ಸೌಹಾರ್ದಕ್ಕೆ ಧಕ್ಕೆ ಆಗದಿರಲಿ
ಇಲ್ಲಿನ ನಗರಸಭೆ ಕಾಂಗ್ರೆಸ್ ಸದಸ್ಯ ಆಸೀಫ್ ಮುಜಾವರ ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಫಾರ್ವರ್ಡ್ ಮಾಡಿರುವುದು ನಿಜ. ಆದರೆ, ಇದನ್ನು ಕೋಮು ಸೌಹಾರ್ದಕ್ಕೆ ಧಕ್ಕೆ ಬರುವಂತೆ ಬಿಂಬಿಸದೇ ನಗರದಲ್ಲಿ ಎಲ್ಲ ಪಕ್ಷ ಹಾಗೂ ಧರ್ಮದವರು ಪ್ರೀತಿ, ಸೌಹಾರ್ದ ವಾತಾವರಣ ನಿರ್ವಣಕ್ಕೆ ಸಹಕರಿಸಬೇಕು ಎಂದು ಸೈಯದ್ ತಂಗಳ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೋಮು ಸೌಹಾರ್ದತೆಗೆ ಆದ್ಯತೆ ನೀಡುತ್ತ ಬಂದಿದೆ. ನಗರದಲ್ಲಿ ಎಲ್ಲ ಧರ್ಮದವರು ಶಾಂತಿಯುತ ಜೀವನ ನಡೆಸಲು ಸಹಕರಿಸುತ್ತಿದೆ. ಯಾವುದೇ ಕಾರಣಕ್ಕೂ ಕೋಮು- ಸೌಹಾರ್ದಕ್ಕೆ ಧಕ್ಕೆ ತರುವಂತಹ ಕಾರ್ಯಕ್ಕೆ ಕಾಂಗ್ರೆಸ್ ಪ್ರಚೋದನೆ ನೀಡುವುದಿಲ್ಲ ಎಂದರು.