

ಸಿದ್ದಾಪುರ: ಇಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
ಸಿದ್ದಾಪುರ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕಾಡುಪ್ರಾಣಿಗಳ ಹಾವಳಿ, ಕುಡಿಯುವ ನೀರು, ನಿವೇಶನ, ವಸತಿ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಶುಚಿತ್ವ ಕಾಣದ ಸಂತೆ ಮಾರುಕಟ್ಟೆ, ಸಿದ್ದಾಪುರ ಆಸ್ಪತ್ರೆ ಸಮಸ್ಯೆ, ವಿದ್ಯುತ್ ಕಡಿತ, ಅಭಿವೃದ್ಧಿ ಕಾಣದ ರಸ್ತೆಗಳು, ಬಾಳು ಬಿದ್ದಿರುವ ಪಿಡಬ್ಲ್ಯೂಡಿ ಹೊಸ ಕಟ್ಟಡ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ನದಿ ತೀರದ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸಲು ಮಾಲ್ದಾರೆಯ ಬಳಿ 10 ಎಕರೆ ಜಾಗ ಗುರುತಿಸಲಾಗಿದ್ದು, ಸಮಸ್ಯೆ ಬಗೆಹರಿಸಲಾಗುವುದು. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನ ಸೆಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂ ತ್ರಣಕ್ಕೆ ತರಲು ರೈಲ್ವೆ ಬ್ಯಾರಿಕೇಡ್, ಸೋಲಾರ್‌ಬೇಲಿ, ಕಂದಕ ನಿರ್ಮಾಣ ಯೋಜನೆಯನ್ನು ತ್ವರಿತಗತಿಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ವಿರಾಜಪೇಟೆ ವಲಯ ವ್ಯಾಪ್ತಿಯಲ್ಲಿ ಬೆಳೆ ನಾಶ ಮಾಡುವ ಮೂಲಕ ಜನರ ಮೇಲೆ ದಾಳಿ ಮಾಡುವ 50 ಆನೆಗಳನ್ನು ಗುರುತಿಸಿ ಸೆರೆ ಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸಾರ್ವಜನಿಕ ಆಟದ ಮೈದಾನದ ಸಮಸ್ಯೆ ಬಗೆಹರಿಸಲು ಸೂಕ್ತ ಜಾಗ ಹುಡುಕುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೆಸ್ಕ್ ವತಿಯಿಂದ ಹೊಸ ಸಬ್ ಸ್ಟೇಷನ್ ಮಾಡಲಾಗುತ್ತಿದ್ದು, ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಆಸ್ಪತ್ರೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಇತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ದೂರು ನೀಡಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಾರ್ವಜನಿಕರು ಕೈಜೋಡಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ತಹಸೀಲ್ದಾರ್ ರಾಮಚಂದ್ರ, ತಾಪಂ ಇಒ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಪಿಡಿಒ ಮನಮೋಹನ್, ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ, ಕಂದಾಯ ಇಲಾಖೆಯ ಅನಿಲ್, ಸೆಸ್ಕ್‌ನ ಸುರೇಶ್, ಮಾಲ್ದರೆ ಗ್ರಾಪಂ ಅಧ್ಯಕ್ಷ ಮಾಲತಿ ಇತರರು ಇದ್ದರು.