

ಶನಿವಾರಸಂತೆ: ಸಹಕಾರಿ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿಸುವುದರಿಂದ ಸಂಘ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ್ ತಿಳಿಸಿದರು.
ಅವರು ಸದರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಬೆಳವಣಿಗೆಯಲ್ಲಿ ಸಹಕಾರಿ ಸದಸ್ಯರ ಸಹಕಾರ ಪ್ರಮುಖವಾದದ್ದು, ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸಿ ಸಹಕರಿಸಬೇಕು ಮತ್ತು ಸಂಘದಲ್ಲಿ ಕೃಷಿ ಸಾಲ ಪಡೆಯುವ ಸಂದರ್ಭದಲ್ಲಿ ಸಂಘದ ನಿಯಮದಂತೆ ತಮ್ಮ ಜಮೀನಿನ ಪಹಣೆ ಪತ್ರದಲ್ಲಿ ವ್ಯತ್ಯಾಸವಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಸಂಘದಲ್ಲಿ ಸಾಲ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಂಘವು ಈ ಸಾಲಿನಲ್ಲಿ 13,29,773 ರೂ. ನಿವ್ವಳ ಲಾಭ ಗಳಿಸಿದೆ. ಈ ಮೂಲಕ ಕಳೆದ ಸಾಲಿಗಿಂತ ಹೆಚ್ಚಿನ ಲಾಭ ಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸಪ್ಪ ಸದರಿ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, ಸಂಘದಲ್ಲಿ 1497 ಮಂದಿ ಸದಸ್ಯರಿದ್ದು ಸದಸ್ಯರ ಎ ತರಗತಿಯ ಪಾಲು ಹಣ 1,66,41,207 ರೂ.ಇದೆ. ಸಂಘವು 2024-25ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕಿನಲ್ಲಿ 13,65,19,940 ರೂ.ಸಾಲ ಪಡೆಯಲಾಗಿದೆ. ಈ ಮೂಲಕ ಸಂಘದ 760 ಸದಸ್ಯರಿಗೆ ಈ ಸಾಲಿನಲ್ಲಿ 14,82,26,538 ರೂ. ಕೆಸಿಸಿ ಸಾಲವನ್ನು, 9 ಸದಸ್ಯರಿಗೆ ಆಭರಣ ಸಾಲ 10,13,100 ರೂ.ಹಾಗೂ ಸಂಘದ ನೌಕರ ವರ್ಗದವರಿಗೆ ಅಸ್ಸಾಮಿ ಸಾಲ 9,65,408 ರೂ.ಗಳನ್ನು ಮತ್ತು 26 ಸದಸ್ಯರಿಗೆ ಜಮೀನು ಸಾಲ 19,50,000 ರೂ. ವಿತರಿಸಿದೆ ಎಂದು ತಿಳಿಸಿದರು.
ಸಂಘವು 2024-25ನೇ ಸಾಲಿನಲ್ಲಿ 1,20,13, 329ರೂ. ವ್ಯಾಪಾರ ವಹಿವಾಟು ನಡೆಸಿ 9,28,614 ರೂ.ವ್ಯಾಪಾರ ಲಾಭ ಗಳಿಸಿದೆ. ಸಂಘದ ಕಾರ್ಯಕ್ಷೇತ್ರದಲ್ಲಿರುವ ಸಂಘದ ರೈತರು ಸಂಘದ ಮೂಲಕವೇ ರಸಾಯನಿಕ ಗೊಬ್ಬರ, ಮೈಲಿತುತ್ತು ಖರೀದಿಸುವಂತೆ ತಿಳಿಸಿದರು.
ಸಂಘದ ಬೆಳವಣಿಗೆ ಮತ್ತು ಸಹಕಾರ ಸದಸ್ಯರಿಗೆ ಲಭಿಸುವ ಅನುಕೂಲಗಳ ಬಗ್ಗೆ ಚರ್ಚಿಸಲಾಯಿತು.
ಸಂಘದ ಹಿರಿಯ ಸಹಕಾರಿ ಸದಸ್ಯರಾದ ಎಸ್.ಕೆ.ವೀರಪ್ಪ, ವಿನುತ್ ಶಂಕರ್, ರವಿ ಕುಮಾರ್, ನಿರಂಜನ್, ಕೆ.ವಿ.ಶಿವಪ್ಪ, ಮಂಜುನಾಥ್, ಶಿವಾನಂದ್, ಬಸವರಾಜ್, ನಂಜಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಂತರಾಜ್ ಮುಂತಾದ ಸಹಕಾರಿಗಳು ಸಭೆಯಲ್ಲಿ ಚರ್ಚಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಯಶವಂತ, ಆಡಳಿತ ಮಂಡಳಿ ನಿರ್ದೇಶಕರಾದ ವೀರೇಂದ್ರ ಕುಮಾರ್, ಸಂದೀಪ್, ಮಧು, ರಮೇಶ್, ವಿಶಾಲಾಕ್ಷಿ, ಕೆ.ಎನ್.ಮಧುರಾ, ಮೋಹನ್, ರವೀಶ್, ದೇವರಾಜು, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಆರ್.ಅನುರಾಧಾ, ಸಂಘದ ಹಿರಿಯ ಗುಮಾಸ್ತೆ ಶೋಭಾ, ಕಿರಿಯ ಗುಮಾಸ್ತ ಹುಸೈನಾರ್, ಮಾರಾಟ ಗುಮಾಸ್ತ ಕೆ.ಎಸ್ ಸಂತೋಷ್, ಸೋಮಶೇಖರ್ ಮತ್ತಿತರರರು ಹಾಜರಿದ್ದರು.