ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ತಕ್ಷಣಕ್ಕೆ ಹಂಗಾಮಿ ಕುಲಪತಿಯನ್ನಾದರೂ ನೇಮಕ ಮಾಡಬೇಕು. ಇಲ್ಲವಾದರೆ ವಿವಿ ಕ್ರಾಫರ್ಡ್ ಭವನದ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ವಿವಿಯ ಸಂಶೋಧಕರ ಸಂಘ ಎಚ್ಚರಿಸಿದೆ.
ಹಾಲಿ ಕುಲಪತಿ ನೇಮಕಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿ 53 ದಿನ ಕಳೆದಿದೆ. ಹೀಗಾಗಿ ಹಂಗಾಮಿ ಕುಲಪತಿ ನೇಮಕಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ, ಹಂಗಾಮಿಯನ್ನೂ ನೇಮಕ ಮಾಡದೆ ವಿವಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಕುಮಾರ್ ಕಲ್ಮಳ್ಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪದವಿ ಮುಗಿಸಿದವರಿಗೆ ಪದವಿ ಪ್ರದಾನ ಮಾಡಲು ಘಟಿಕೋತ್ಸವ ಆಯೋಜಿಸಬೇಕಿದೆ. ವಿವಿಗೆ ಒಳಪಡುವ ಕಟ್ಟಡ, ಕಾಲೇಜುಗಳಲ್ಲಿ ಮೂಲ ಸೌಕರ್ಯ ಕೊರತೆಯುಂಟಾಗಿದೆ. ಎರಡು ವರ್ಷಗಳಾದರೂ ಪಿಎಚ್.ಡಿ ಪ್ರವೇಶ ಪರೀಕ್ಷೆ, ಕೆ-ಸೆಟ್ ಪ್ರವೇಶ ಪರೀಕ್ಷೆ ನಡೆಯದ ಕಾರಣ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಪಿಎಚ್.ಡಿ ಮಹಾ ಪ್ರಬಂಧಗಳ ಮೌಲ್ಯ ಮಾಪನ ನಡೆಯದೆ ಸಂಶೋಧನೆ ಮುಗಿಸಿರುವ ಸಂಶೋಧಕರಿಗೆ ಸಮಸ್ಯೆ ಎದುರಾಗಿದೆ. ಹಿರಿಯ ಡೀನ್‌ಗಳಿಗೆ ಇರುವ ಹಂಗಾಮಿ ಕುಲಪತಿಯಾಗುವ ಅವಕಾಶ ತಪ್ಪುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಹಂಗಾಮಿ ಕುಲಪತಿಗಳನ್ನು ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಂಘದ ಅಧ್ಯಕ್ಷ ಸಿ. ಮಹೇಶ್, ಮುಖಂಡರಾದ ಆನಂದ್, ಎಂ.ಲಿಂಗರಾಜು ಇದ್ದರು.