

ಗುಂಡ್ಲುಪೇಟೆ: ಗುಂಡ್ಲು ನದಿ ಉಗಮತಾಣವಾದ ತಾಲೂಕಿನ ಹಂಗಳ ಸಮೀಪದ ಹಿರೀಕೆರೆಯ ಏರಿಯ ಉದ್ದಕ್ಕೂ ಸಣ್ಣ ಬಿರುಕು ಹಾಗೂ ದೊಡ್ಡ ದೊಡ್ಡ ಕೊರಕಲುಗಳು ಉಂಟಾಗಿರುವುದರ ಕುರಿತು ಅ.22ರಂದು ವಿಜಯವಾಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸ್ಥಳದಲ್ಲಿದ್ದ ರೈತ ಮುಖಂಡ ಹಂಗಳ ಮಾಧು ಹಾಗೂ ದಿಲೀಪ್ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ಏರಿಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಏರಿ ಒಡೆದರೆ ಭಾರಿ ಅನಾಹುತ ಸಂಭವಿಸಲಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಉಪವಿಭಾಗದ ಎಇಇ ಸಂತೋಶ್, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಕೆರೆ ಏರಿಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಅಲ್ಲಲ್ಲಿ ತಗ್ಗುಂಟಾಗುತ್ತಿದೆ. ಇದನ್ನು ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ದುರಸ್ತಿಗೊಳಿಸಲಾಗುವುದು. ಅಲ್ಲಿಯವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಭಿಸುವಂತೆ ತಹಸೀಲ್ದಾರ್‌ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.