ಹಂಗಳ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

07-GPT-1
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮಪಂಚಾಯಿತಿ ಎದುರು ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ ಜನರಿಂದ ಪ್ರಭುಸ್ವಾಮಿ ಮಾಹಿತಿ ಪಡೆದುಕೊಂಡರು. ತಾಪಂ ಇಒ ಶ್ರೀಕಂಠರಾಜೇ ಅರಸ್, ಪಿಡಿಒ ಶಾಂತಮಲ್ಲಪ್ಪ ಇದ್ದರು.
Published on

ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಯು ತಮ್ಮ ಜನಾಂಗದವರಿಗೆ ನಿವೇಶನ ನೀಡಿಲ್ಲದಿರುವುದನ್ನು ವಿರೋಧಿಸಿ ಆದಿಕರ್ನಾಟಕ ಜನಾಂಗದ ಜನರು ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದರು.

ಕಳೆದ 2018ರಲ್ಲಿ ಗ್ರಾಮಪಂಚಾಯಿತಿಯು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿತ್ತು. ನಿವೇಶನ ನೀಡಲು ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಏಜೆಂಟರ ಮೂಲಕ ಪ್ರತಿಯೊಬ್ಬ ಫಲಾನುಭವಿಯಿಂದಲೂ 5-10 ಸಾವಿರ ರೂ. ಲಂಚ ವಸೂಲು ಮಾಡಿದ್ದಾರೆ. ಆದರೆ ಕಳೆದ ತಿಂಗಳು ಸಚಿವ ವಿ.ಸೋಮಣ್ಣ 173 ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಂದರ್ಭದಲ್ಲಿ ತಮ್ಮ ಜನಾಂಗದ ಒಬ್ಬರಿಗೂ ನೀಡಿಲ್ಲ. ನಮಗೆ ಇದರಿಂದ ಇತ್ತ ಹಣವೂ ಇಲ್ಲ, ನಿವೇಶನವೂ ಇಲ್ಲ ಎಂಬಂತಾಗಿದೆ. ನಮ್ಮ ಜನಾಂಗದವರಿಗೆ ಮೇಲುಕಾಮನಹಳ್ಳಿ ಸಮೀಪ ಹೊಸದಾಗಿ ಭೂಮಿ ಗುರುತಿಸಿ ಅಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ವಿತರಿಸಿರುವ ಎಲ್ಲ ಹಕ್ಕುಪತ್ರಗಳನ್ನು ರದ್ದುಗೊಳಿಸಿ ಕೂಡಲೇ ಎಲ್ಲರಿಗೂ ಒಂದೇ ಕಡೆ ನಿವೇಶನ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ನೋಡಲ್ ಅಧಿಕಾರಿ ಪ್ರಭುಸ್ವಾಮಿ ಮಾತನಾಡಿ, ಮತ್ತೊಮ್ಮೆ ಗ್ರಾಮಸಭೆ ಹಾಗೂ ವಾರ್ಡ್ ಸಭೆ ನಡೆಸಿ ನಿವೇಶನರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ ನಿವೇಶನಕ್ಕೆ ಅಗತ್ಯವಾದ ಭೂಮಿಯನ್ನು ಗುರ್ತಿಸಿ ಖರೀದಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net