

ಕೊಳ್ಳೇಗಾಲ: ಪಟ್ಟಣದಲ್ಲಿ ಸೋಮವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಜಾಥಾದಲ್ಲಿ ವಿವಿಧ ಇಲಾಖೆಯ ನೌಕರರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಪಟ್ಟಣದ ತಾಲೂಕು ಕಚೇರಿ ಆವರಣದಿಂದ ಪ್ರಮುಖ ರಸ್ತೆಗಳಲ್ಲಿ ಮೊಂಬತ್ತಿ ಹಿಡಿದು ಸಾಗುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರೂ ಮತದಾನ ಮಾಡಿ, ಮತದಾನದ ಪ್ರಾಮುಖ್ಯತೆ, ಮತದಾನದ ಪ್ರಯೋಜನಗಳು, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ ಎಂಬ ಘೋಷಣೆಗಳು ಮೊಳಗಿದವು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಪೂವಿತಾ ಮಾತನಾಡಿ, 18 ವರ್ಷದ ಮೇಲ್ಪಟ್ಟ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು. ಮತದಾನ ಒಂದು ಹಬ್ಬದಂತೆ, ಅದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ಉಪವಿಭಾಗಾಧಿಕಾರಿ ಗೀತಾ ಹುಡೇದ ಮಾತನಾಡಿ, ಸದೃಢ ಪ್ರಜಾಪ್ರಭುತ್ವಕ್ಕೆ ಮತದಾನವೇ ಬುನಾದಿಯಾಗಿದೆ. ಈ ಹಿನ್ನೆಲೆ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ. ಒಂದು ವೇಳೆ ಯಾವ ಅಭ್ಯರ್ಥಿಗೂ ಮತ ನೀಡಲು ಇಷ್ಟವಿಲ್ಲದವರು ನೋಟಾ ಎಂಬ ಆಯ್ಕೆ ಮಾಡುವ ಅವಕಾಶವಿದೆ ಎಂದರು.
ತಹಸೀಲ್ದಾರ್ ಮಂಜುಳಾ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ಸಿಡಿಪಿಒ ನಾಗೇಶ್ ಮತ್ತಿತರಿದ್ದರು.