ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮ್ಯಾರಥಾನ್ ಪೂರಕ

20blk1
 ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಶುಕ್ರವಾರ ಆಯೋಜಿಸಿದ್ದ ಚನ್ನಬಸವ ಮ್ಯಾರಥಾನ್ ಓಟಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಬಲೂನ್ ಹಾರಿಸಿ ಚಾಲನೆ ನೀಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ವಿಜಯಕುಮಾರ ರಾಜಭವನ, ಚಂದ್ರಶೇಖರ ಬನ್ನಾಳೆ, ರವೀಂದ್ರ ಚಿಡಗುಪ್ಪೆ ಇದ್ದರು.
Published on

ಭಾಲ್ಕಿ: ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ನಿಮಿತ್ತ ಪಟ್ಟಣದಲ್ಲಿ ಶುಕ್ರವಾರ ನಡೆದ ಚನ್ನಬಸವ ಮ್ಯಾರಥಾನ್ ಓಟ ಸೊಬಗು ನೀಡಿತು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಚನ್ನಬಸವ ಮ್ಯಾರಥಾನ್ ಓಟಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಬಲೂನ್ ಹಾರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಸಮಾಜದ ಹಿತಕ್ಕಾಗಿ ಅದ್ಭುತ ಕಾರ್ಯಗಳು ಮಾಡಿದ್ದಾರೆ. ಅವರ ಸವಿನೆನಪು ಮತ್ತು ಸುಂದರ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕಾಗಿ ಮ್ಯಾರಥಾನ್ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಮ್ಮೆ ತರಿಸಿದೆ ಎಂದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರು ಜೀವನದುದ್ದಕ್ಕೂ ಬಸವಣ್ಣನವರ ತತ್ವ ಮತ್ತು ಕನ್ನಡದ ಪ್ರೇಮ ಎತ್ತಿ ಹಿಡಿದವರು. ಅವರ ಆದರ್ಶ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ದೇವರು, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಚನ್ನಬಸವ ಮ್ಯಾರಥಾನ್ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಚಿಡಗುಪ್ಪೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ದೈಹಿಕ ನಿರ್ದೇಶಕರಾದ ಹಣಮಂತ ಕಾರಾಮುಂಗೆ, ಅನಿಲಕುಮಾರ ಪಾಟೀಲ್ ಇತರರಿದ್ದರು. ಈಶ್ವರ ರುಮ್ಮಾ ನಿರೂಪಣೆ ಮಾಡಿ ವಂದಿಸಿದರು.

ಬಾಕ್ಸ್

ಉತ್ಸಾಹ ತುಂಬಿದ ಓಟ: ಪಟ್ಟಣದಲ್ಲಿ ನಡೆದ ಮ್ಯಾರಥಾನ್ ಓಟ ಜನರಲ್ಲಿ ಉತ್ಸಾಹ ತುಂಬಿತು. ಮುಂಜಾನೆಯ ಚುಮು ಚುಮು ಚಳಿಯಲ್ಲಿ ಓಟದ ರಸ ಉಂಡ ಕ್ರೀಡಾಪಟುಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಲ್ಲೂ ಹುರುಪು ತುಂಬಿದರು. ಓಟದಲ್ಲಿ ಗಡಿ ಜಿಲ್ಲೆಯ ಬೀದರ್‌ನ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಕ್ಕೂ ಅಧಿಕ ಓಟಗಾರರು ಸ್ಥಳೀಯರೊಂದಿಗೆ ಸೇರಿ ಮಿಂಚಿನ ಸಂಚಾರ ಮೂಡಿಸಿದರು. ಬೆಳಕು ಹರಿಯುವ ಹೊತ್ತಿಗೆ ಚನ್ನಬಸವಾಶ್ರಮ ರಸ್ತೆಯಿಂದ ಆರಂಭಗೊಂಡ ೫.೪೦ ಕಿಮೀ ಉದ್ದದ ಮ್ಯಾರಥಾನ್ ಓಟ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಷ್ಟೊರೆ ಕಲ್ಯಾಣ ಮಂಟಪ ಮಾರ್ಗವಾಗಿ ಚನ್ನಬಸವೇಶ್ವರ ಪದವಿ ಕಾಲೇಜು ಸಮೀಪದಿಂದ ಮುಖ್ಯ ರಸ್ತೆ ಪ್ರವೇಶಗೊಂಡು ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಂದು ಚನ್ನಬಸವಾಶ್ರಮದ ಮುಖ್ಯ ರಸ್ತೆ ತಲುಪಿತು.

ಬಜರಂಗ ಪ್ರಥಮ: ಚನ್ನಬಸವ ಮ್ಯಾರಥಾನ್ ಓಟದಲ್ಲಿ ತಾಲೂಕಿನ ಗಡಿಭಾಗದ ಅಟ್ಟರಗಾ ಗ್ರಾಮದ ನಿವಾಸಿ ಮತ್ತು ಬೀದರ್ ಗುರುನಾನಕ್ ಕಾಲೇಜಿನ ವಿದ್ಯಾರ್ಥಿ ಬಜರಂಗ ಉತ್ತಮರಾವ ಪ್ರಥಮ, ಕದೀರಾಬಾದ ವಾಡಿಯ ಮನೋಜ ತುಕಾರಾಮ ದ್ವಿತೀಯ ಮತ್ತು ಬೀದರ್‌ನ ಆದಿತ್ಯ ಅವಿನಾಶ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಡಿ.೨೨ ರಂದು ಬಹುಮಾನ ವಿತರಿಸಲಾಗುವುದು ಎಂದು ಪೂಜ್ಯರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net