ಸ್ವಾವಲಂಬಿಗಳಾಗಿ ಮುಖ್ಯವಾಹಿನಿಗೆ ಬನ್ನಿ

3-klr-1
Published on

ಕೋಲಾರ: ಗ್ರಾಮೀಣ ಮಹಿಳೆಯರು ಸರ್ಕಾರದ ಯೋಜನೆ, ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಪ್ರಜಾ ಸೇವಾ ಸಮಿತಿ, ಅಂಗನವಾಡಿ, ಅಕ್ಷರ ದಾಸೋಹ, ಆಶಾ, ವಿಆರ್‌ಡಬ್ಲ್ಯು, ಎಂಆರ್‌ಡಬ್ಲ್ಯು ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯೆಯರಿಗೆ ಡಿಸಿಸಿ ಬ್ಯಾಂಕ್ ನೀಡುವ ಸಾಲ ಸೌಲಭ್ಯದ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಕಟ್ಟಡ ಕಡೆಯ ಬಡ ಕುಟುಂಬದ ಮಹಿಳೆಗೂ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಮಹಿಳೆಯರಿಗೆ ಸಕಾಲಕ್ಕೆ ತಲುಪಿಸಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ತಿಳಿಸಲಾಗಿದೆ. ಮಹಿಳೆಯರಿಗೆ ಯಾವುದೇ ಸಮಸ್ಯೆಯಾದಲ್ಲಿ ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್‌ಬಾಬು ಮಾತನಾಡಿ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಶೋಷಣೆ ನಡೆದಲ್ಲಿ ಠಾಣೆಗೆ ಅಥವಾ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದಲ್ಲಿ 10 ನಿಮಿಷದಲ್ಲಿ ನಿಮ್ಮ ನೆರವಿಗೆ ಬರಲಿದೆ. ಹಳ್ಳಿಗಳಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದಲ್ಲಿ ಸಂಬಂಧಟ್ಟ ಠಾಣೆಗೆ ತಿಳಿಸಬೇಕು ಎಂದರು.

ಸಮಿತಿಗಳ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ, ಬಿಸಿಯೂಟ ಸಿಬ್ಬಂದಿಗೆ ಸರ್ಕಾರ 2018ರಲ್ಲಿ 500 ರೂ. ವೇತನ ಹೆಚ್ಚಳ ಮಾಡಿದ್ದು ಬಿಟ್ಟರೆ ನಂತರದಲ್ಲಿ ಆಡಳಿತಕ್ಕೆ ಬಂದ ಎಲ್ಲ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ. ಕರೊನಾ ಸಂದರ್ಭದಲ್ಲೂ ಬಿಸಿಯೂಟ ನೌಕರರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ನರಸಾಪುರ ಎಸ್.ನಾರಾಯಣಸ್ವಾಮೀಜಿ. ಜೆ.ಹಳ್ಳಿ ನಾರಾಯಣಸ್ವಾಮಿ, ಕಲ್ವಮಂಜಲಿ ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ಮಂಜುನಾಥ್, ಕೊಲದೇವಿ ಗೋಪಾಲಕೃಷ್ಣಮೂರ್ತಿ, ನಾಗವೇಣಮ್ಮ, ಗಂಗರತ್ನಮ್ಮ, ಜಮುನಾರಾಣಿ, ನಿರ್ಮಲಾಬಾಯಿ, ಎಸ್.ಆರ್.ಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಕೋಡಿಹಳ್ಳಿ ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net