ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಿ:ಡಿಸಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಿ:ಡಿಸಿ
Published on

 ಹಾಸನ: ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿ ಸುಶಿಕ್ಷಿತರನ್ನಾಗಿ ಮಾಡುವುದರ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.

ಜಿಲ್ಲಾ ಗಾಂಧಿ ಭವನ, ರೆಡ್ ಕ್ರಾಸ್ ಸಂಸ್ಥೆ, ಪ್ರೇರಣಾ ವಿಕಾಸ ವೇದಿಕೆ, ಹಸಿರು ಭೂಮಿ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಶನಿವಾರ ದಿಂದ ಮತ್ತು ಭಾನುವಾರ ವರೆಗೂ ಆಯೋಜಿಸಿರುವ ಚರಕ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಪ್ರಾಮಾಣಿಕವಾಗಿ ನಡೆದುಕೊಳ್ಳುವಂತೆ ತಿದ್ದಿ ತಿಳುವಳಿಕೆ ಹೇಳಬೇಕು ಎಂದು ಹೇಳಿದರು.

ಜ್ಞಾನಕ್ಕಾಗಿ ವಿದ್ಯೆಬೇಕು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಉದ್ಯೋಗಕ್ಕಾಗಿ ಅಲೆಯುವ ಬದಲು ತಮ್ಮಲ್ಲಿರುವ ಕೌಶಲ್ಯತೆಯನ್ನು ಬಳಸಿಕೊಂಡು ಸೃಜನಾತ್ಮಕವಾಗಿ ಕೆಲಸ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡಲು ಒಂದು ಸಣ್ಣ ಪ್ರಯತ್ನವಾಗಿ ಪ್ರಾರಂಭಿಸಲಾಗಿದೆ. ಈ ಶಿಬಿರ ಫಲಕಾರಿಯಾಗಲಿ ಎಂದು ಶುಭ ಹಾರೈಸಿದರಲ್ಲದೆ, ಎಲ್ಲಾ ಶಾಲಾ ಮಕ್ಕಳು ಈ ಶಿಬಿರದ ಲಾಭ ಪಡೆಯುವಂತಾಗಲಿ ಎಂದರು.

ನಾವು ಧರಿಸುವ ಬಟ್ಟೆಯ ಹಿಂದೆ ಎಷ್ಟು ಜನರ ಪರಿಶ್ರಮ ಅಡಗಿದೆ ಎಂಬುದನ್ನು ಮಕ್ಕಳಿಗೆ ಗೊತ್ತುಪಡಿಸಬೇಕು ಎಂದರಲ್ಲದೆ, ಸಣ್ಣ ಮಕ್ಕಳಲ್ಲಿಯೇ ಸ್ವಾವಲಂಬಿ ಬದುಕಿನ ಚಿಂತನೆ ಬಿತ್ತಬೇಕು. ಗಾಂಧಿ ಭವನವನ್ನು ಅಚ್ಚುಕಟ್ಟಾಗಿ ಇರಿಸುವುದರ ಜೊತೆಗೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ಸವಾಲು ಈ ನಿಟ್ಟಿನಲ್ಲಿ ಗಾಂಧಿ ಭವನ ನಿರ್ವಹಣೆಗೆ ಒಂದು ಸಮಿತಿ ರಚನೆ ಮಾಡಿದ್ದು, ಗಾಂಧಿ ತತ್ವಗಳಿಗೆ ಅನುಗುಣವಾಗಿ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಬಳಕೆ ಮಾಡಿಕೊಳ್ಳಲು ಈಗಾಗಲೇ ದರ ನಿಗದಿ ಪಡಿಸಲಾಗಿದೆ ಎಂದು ಹೇಳಿದರು.

ಕೈ ಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತೆ ಕೆ.ಜ್ಯೋತಿ ಮಾತನಾಡಿ, ನಾವು ಮಾತನಾಡುವ ಬದಲಾಗಿ ನಾವೆಲ್ಲರೂ ಒಂದು ಕಡೆ ಸೇರಿ ಹೆಚ್ಚು ಕಾರ್ಯ ಮಾಡುವ ಮೂಲಕ ಅದು ಮಾತನಾಡುವಂತೆ ಆಗಬೇಕು ಎಂದು ತಿಳಿಸಿದರು.

ಭೂಮಿ, ನೀರು, ವಾಯು ಎಲ್ಲವೂ ಕಲುಷಿತವಾಗಿವೆ ಮುಂದಿನ ಪೀಳಿಗೆಗೆ ಉತ್ತಮವಾದ ವಾತಾವರಣ ಉಳಿಸಲು ಎಲ್ಲರ ಜವಾಬ್ಬಾರಿ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡಲು ಪ್ರಾರಂಭಿಸಿರುವುದು ಒಂದು ಉತ್ತಮ ಬೆಳವಣಿಗೆ ಪ್ರತಿ ಮನೆಗೊಂದು ಚರಕ ಬಳಕೆಗೆ ಬಂದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಮೈಸೂರಿನ ಕೆ.ಜೆ.ಸಚ್ಚಿನಾಂದ ಮಾತನಾಡಿ, ಗಾಂಧಿಯನ್ನು ಸ್ಮರಿಸಿ ಮಾತನಾಡುವ ಬದಲಾಗಿ ಅವರು ಮಾಡಿರುವಂತಹ ಕೆಲಸಗಳನ್ನು ಅನುಸರಿಸಿ ಕಾರ್ಯಗತಗೊಳ್ಳಿಸುವ ನಿಟ್ಟಿನಲ್ಲಿ ಸಾಗಿದರೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿದರು.

ಕೆಲವು ಉತ್ಪನ್ನಗಳನ್ನು ಫವರ್‌ಲೂಮ್ ಮಾಡುವಂತಿಲ್ಲ ಆದರೂ ಸಹ ಹಾಗೆಯೇ ಮುಂದುವರೆಯುತ್ತಿದೆ ಎಂದ ಅವರು ಖಾದಿಗೂ - ಹ್ಯಾಂಡ್‌ಲೂಮ್‌ಗೂ ವ್ಯತ್ಯಾಸವಿದೆ ಎಂದರು. ಶಾಲೆಯಲ್ಲಿ ಮಕ್ಕಳು ವಾರಕ್ಕೊಮ್ಮೆ ನೂಲು ತೆಗೆದರೆ ವರ್ಷಕ್ಕೆ ಆಗುವ ಸಮವಸ್ತ್ರ ತಯಾರಿಸಬಹುದು ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಆರ್.ಪಿ ವೆಂಕಟೇಶಮೂರ್ತಿ ಮಾತನಾಡಿ, ಗಾಂಧಿಭವನದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡುವ ಮೂಲಕ ಇದೊಂದು ಆಂದೋಲನವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ ಮೋಹನ್, ಪ್ರೇರಣಾ ವಿಕಾಸ ವೇದಿಕೆಯ ಅಧ್ಯಕ್ಷೆ ರೂಪ ಹಾಸನ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಬಿ ವೆಂಕಟೇಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net