

ಔರಾದ್: ಮಹಿಳೆಯರು ಸ್ವಾವಲಂಬಿ ಬದುಕಿಗೆ ಟೇಲರಿಂಗ್ ಸೇರಿದಂತೆ ವಿವಿಧ ಕೌಶಲ ತರಬೇತಿ ಪಡೆಯುವ ಅಗತ್ಯವಿದೆ ಎಂದು ರಿಲಾಯನ್ಸ್ (ಬಿಜ್) ಫೌಂಡೇಷನ್ ಬೀದರ್ ಸಹಾಯಕ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ ಹೇಳಿದರು.
ಗುರುವಾರ ತಾಲೂಕಿನ ಬೆಳಕುಣಿ(ಚೌ) ಗ್ರಾಮದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ಟೇಲರಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಏನೂ ಗೊತ್ತಿಲ್ಲ, ಯಾವ ಉದ್ಯೋಗದ ಅನುಭವ ಇಲ್ಲ ಎನ್ನುವ ಸಬೂಬು ಹೇಳುವುದನ್ನು ಮೊದಲು ಬಿಟ್ಟು ಕೌಶಲ ಪಡೆದು ಬದುಕು ಕಟ್ಟಿಕೊಳ್ಳಲು ಸಂಕಲ್ಪ ಮಾಡಬೇಕು ಎಂದರು.
ಸ್ವಯಂ ತರಬೇತಿಗೆ ಅಗತ್ಯವಿರುವ ಉಪನ್ಯಾಸ ಮತ್ತು ತರಬೇತಿ ನೀಡಿ ಮಹಿಳೆಯರನ್ನು ಸಬಲರಾಗಲು ರಿಲಾಯನ್ಸ್ ಯೋಜನೆ ಜಾರಿಗೆ ತಂದಿದೆ. ಜೀವನೋಪಾಯ ಯೋಜನೆ ಅಡಿಯಲ್ಲಿ ಟೇಲರಿಂಗ್, ಕರಕುಶಲ ವಸ್ತು ತಯಾರಿಕೆ, ಬಟ್ಟೆ ಬ್ಯಾಗ್ ತಯಾರಿಕೆಗಳಂಥ ತರಬೇತಿಗಳನ್ನು ಗ್ರಾಮ ಮಟ್ಟದಲ್ಲಿಯೇ ಪರಿಣಿತರಿಂದ ಆಯೋಜಿಸಿ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸುಮಾ ಮಾತನಾಡಿದರು. ರವಿ ವಲ್ಲಾಪುರೆ, ಶರಣಪ್ಪ ಇತರರಿದ್ದರು.