

ಪಾಂಡವಪುರ: ಹೈನುಗಾರಿಕೆ ಮೇಲೆ ಅವಲಂಬಿತರಾಗಿರುವ ಕುಟುಂಬದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕಿಗೆ ಡೇರಿಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಅಭಿಪ್ರಾಯಪಟ್ಟರು.
ತಾಲೂಕಿನ ಅಂದಾನಿಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಕ್ಕೂಟದಿಂದ ನೀಡುವ ಸಹಾಯಧನದ ಚೆಕ್ಕನ್ನು ಬುಧವಾರ ವಿತರಿಸಿ ಮಾತನಾಡಿದರು.
ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸಬಾರದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಘದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದ ಬಹುತೇಕ ಕುಟುಂಬಗಳು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಹೈನುಗಾರಿಕೆ ಇಲ್ಲವಾಗಿದ್ದರೆ ಬಹುತೇಕ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಗ್ರಾಮೀಣ ಪ್ರದೇಶದ ಮಹಿಳೆಯರು ಹೈನುಗಾರಿಕೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅನೇಕ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮನ್‌ಮುಲ್‌ನಿಂದ ರಾಸುಗಳಿಗೆ ವಿಮೆ ಸೌಲಭ್ಯ, ಗುಂಪು ವಿಮೆ, ಮೇವು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್, ಮೃತಪಟ್ಟ ರೈತನ ಕುಟುಂಬ ಸದಸ್ಯರಿಗೆ ರೈತ ಕಲ್ಯಾಣ ಟ್ರಸ್ಟ್‌ನಿಂದ ಪರಿಹಾರ, ಡೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಹಲವು ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಒಕ್ಕೂಟ ನೀಡುತ್ತಿದೆ. ಹಾಲು ಉತ್ಪಾದಕರು ಈ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಗುಣಮಟ್ಟದ ಹಾಲು ಪೂರೈಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕರಿಸಬೇಕು. ಹಾಲಿನ ಗುಣಮಟ್ಟದಲ್ಲಿ ತಾಲೂಕು ಎರಡನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನ ಪಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ. ಜತೆಗೆ ರಾಸುಗಳಿಗೆ ಖಾಸಗಿ ಪಶು ಆಹಾರ ನೀಡದೆ ಒಕ್ಕೂಟ ನೀಡುವ ಪೀಡ್ಸ್ ಬಳಸುವಂತೆ ಮನವಿ ಮಾಡಿದರು.
ಈ ವೇಳೆ ನಿವೃತ್ತಿ ಶಿಕ್ಷಕರಾದ ವೆಂಕಟರಾಮೇಗೌಡ, ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಡೇರಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷೆ ಮಂಜುಳಾ ಸುರೇಶ್, ನಿರ್ದೇಶಕರಾದ ಕಾವ್ಯ, ಗೌರಮ್ಮ, ಪ್ರೇಮ್, ಶಾರದಾ, ನಿಂಗಮ್ಮ, ವಸಂತ, ಕಾರ್ಯದರ್ಶಿ ನಾಗವೇಣಿ, ಕವಿತಾ ಇತರರು ಇದ್ದರು.