ಸ್ವಾವಲಂಬಿ ಜೀವನಕ್ಕೆ ಕೌಶಲ ಅಗತ್ಯ

16 vikram 1
Published on

ಧಾರವಾಡ: ಒಳ್ಳೆ ಕೌಶಲ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು. ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ಕುಟುಂಬ, ಹಳ್ಳಿ ಮತ್ತು ರಾಷ್ಟ್ರದ ನಿರ್ಮಾತೃಗಳಾಗಿ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ ಸಲಹೆ ನೀಡಿದರು.
ನಗರದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್, ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಕೌಶಲ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಕೌಶಲ ತರಬೇತಿ ಪಡೆದು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. 39 ವಿವಿಧ ಕ್ಷೇತ್ರದ ತರಬೇತಿಗಳಿವೆ. ಜನರು ಎಲ್ಲವುಗಳನ್ನು ಕಲಿತು ಸ್ವಾವಲಂಬಿಗಳಾಗಲಿ. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಶಾರದಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಜಿ. ಜೋಶಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗೋಪಾಲ ಕಮಲಾಪುರ ಮಾತನಾಡಿ, ಉತ್ತಮ ಭವಿಷ್ಯಕ್ಕೆ ಕೌಶಲವೇ ತಳಹದಿ. ಇದರಿಂದಲೇ ಸ್ವಂತ ಉದ್ಯಮ ಪ್ರಾರಂಭವಾಗುತ್ತದೆ. ಇದು ಗ್ರಾಮೀಣ ಜನರ ಬದುಕು ಸುಧಾರಣೆಗೆ ಅನುಕೂಲವಾಗಲಿದೆ ಎಂದರು.
ಮಂಜುಳಾ ಭಾಂಡಗೆ, ಲತಾ ಬಾಕಳೆ, ಶಶಿಧರ, ಆನಂದ ಚಿನಗಿ, ಮಲ್ಲಿಕಾರ್ಜುನ, ಸಂತೋಷಕುಮಾರ, ಪರ್ವತಗೌಡರ, ವಿದ್ಯಾರ್ಥಿಗಳು, ಇತರರು ಇದ್ದರು. ಯಶೋದಾ ಸ್ವಾಗತಿಸಿದರು. ಮಂಜುಳಾ ಕನವಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net