ಸ್ವಾವಲಂಬನೆಯಿಂದ ಮಹಿಳಾ ಸಬಲೀಕರಣ ಸಾಧ್ಯ

25 Dwd 1 (1)
Published on

ಧಾರವಾಡ: ಪ್ರತಿಯೊಂದು ಕ್ಷೇತ್ರವೂ ಪುರುಷ ಪ್ರಧಾನವಾಗಿದೆ. ಇದಕ್ಕೆ ಕೃಷಿಯೂ ಹೊರತಾಗಿಲ್ಲ. ಯಾವುದೇ ಸರ್ಕಾರ, ಸಂಘ- ಸಂಸ್ಥೆಯಿಂದ ಮಹಿಳಾ ಸಬಲೀಕರಣ ಆಗದು. ಮಹಿಳೆ ಏನಾದರೊಂದು ಸಾಧಿಸುವ ಛಲದಿಂದ ಸ್ವಾವಲಂಬನೆಯ ಬದುಕು ಸಾಗಿಸಿದಾಗ ಮಾತ್ರ ಸಬಲೀಕರಣ ಸಾಧ್ಯ ಎಂದು ರಾಯಚೂರಿನ ಪ್ರಗತಿಪರ ಕೃಷಿ ಉದ್ಯಮಿ ಕವಿತಾ ಮಿಶ್ರಾ ಹೇಳಿದರು.

ಸೆಲ್ಕೋ ಸೋಲಾರ್ ಸಂಸ್ಥೆಯಿಂದ ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ಆಯೋಜಿಸಿದ್ದ ‘ಸಮೃದ್ಧಿ- ಸಂತೃಪ್ತಿ’: ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶವನ್ನು ಸೌರಚಾಲಿತ ಯಂತ್ರದಿಂದ ರೊಟ್ಟಿ ತಯಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂಜಿನಿಯರಿಂಗ್ ಪದವೀಧರರಾದ ಅವರು ಕೃಷಿಯಲ್ಲಿ ಸಾಧಿಸಿದ ಯಶೋಗಾಥೆಯನ್ನು ವಿವರಿಸಿದರು. ‘ಇಂಜಿನಿಯರಿಂಗ್ ಪದವಿಯ ನಂತರ ಬಹುರಾಷ್ಟ್ರೀಯ ಕಂಪನಿ ಸೇರುವ ಗುರಿ ಇತ್ತು. 40 ಸಾವಿರ ವೇತನದ ನೌಕರಿಯೂ ಸಿಕ್ಕಿತ್ತು. ಆದರೆ ಪತಿ ಒಪ್ಪಲಿಲ್ಲ. ಇರುವ 22 ಎಕರೆ ಜಮೀನಿನಲ್ಲಿ ಸಾಧಿಸಿ ತೋರಿಸು ಎಂದು ಸವಾಲು ಹಾಕಿದರು. ನಿರಂತರ 12 ಬೋರ್​ವೆಲ್ ಕೊರೆಸಿದರೂ ನೀರು ಬರಲಿಲ್ಲ. 13ನೇ ಕೊಳವೆ ಬಾವಿಯಲ್ಲಿ ನೀರು ಸಿಕ್ಕಾಗ ದಾಳಿಂಬೆ ಬೆಳೆದೆ. ಮೊದಲು 5.80, ನಂತರ 18 ಲಕ್ಷ ರೂ. ಕೈಗೆ ಬಂತು. ಬಳಿಕ 23 ಲಕ್ಷ ರೂ. ಬಂದಾಗ ಎಲ್ಲ ಹಣವನ್ನೂ ತೋಟಕ್ಕೆ ಬಳಸಿದೆ. ಸಂಪೂರ್ಣ ಹಾನಿಯಾಗಿ ಸಾಲಗಾರರ ಕಾಟ ಹೆಚ್ಚಾಯಿತು. ಸಂಬಂಧಿಕರಾರೂ ಸಹಾಯಕ್ಕೆ ಬರಲಿಲ್ಲ. ಆತ್ಮಹತ್ಯೆಗೂ ಯತ್ನಿಸಿದೆ. ಆದರೆ ಪತಿ ಕೈ ಬಿಡಲಿಲ್ಲ. ದಾಳಿಂಬೆ ಜೊತೆಗೆ ಶ್ರೀಗಂಧ, ಮಾವು, ಪೇರಲ, ಸೀತಾಫಲ, ನುಗ್ಗೆ, ನೆಲ್ಲಿ, ನೇರಳೆ, ಕರಿಬೇವು, ಸಾಗವಾನಿ ಬೆಳೆದೆ. ಜೊತೆಗೆ ಕುರಿ, ಜೇನು, ಕೋಳಿ ಸಾಕಣೆ ಮಾಡಿದೆ. ಸಂಪಾದನೆ ಸಾಧ್ಯವಾಯಿತು. ಆದರೂ ಇಂಜಿನಿಯರಿಂಗ್ ಓದುವ ಮಗಳು ನನ್ನ ಅಸ್ತಿತ್ವವನ್ನೇ ಪ್ರಶ್ನಿಸಿದಳು. ನಂತರ ಶ್ರೀಗಂಧದ ನರ್ಸರಿ ಆರಂಭಿಸಿದೆ. ಶ್ರೀಗಂಧದ ಸಸಿಗಳು ದೇಶಾದ್ಯಂತ ರಫ್ತಾಗುತ್ತಿವೆ. ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಹುಡುಕಿಕೊಂಡು ಬಂದವು’ ಎಂದು ತಮ್ಮ ಸಾಧನೆ ಹಾದಿಯನ್ನು ವಿವರಿಸಿದರು.

ಸೆಲ್ಕೋ ಚೇರ್ಮನ್, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆ ಮಾತನಾಡಿ, ಮಹಿಳಾ ಸೂಚ್ಯಂಕದಲ್ಲಿ ಭಾರತ 133ನೇ ಸ್ಥಾನದಲ್ಲಿದೆ. 21ನೇ ಶತಮಾನದ ತಂತ್ರಜ್ಞಾನದ ಕಾಲದಲ್ಲೂ ಲಿಂಗ ತಾರತಮ್ಯ ಇರುವುದು ಶೋಚನೀಯ. ಇದನ್ನು ಹೋಗಲಾಡಿಸಲು ಸೆಲ್ಕೋ ಸಂಸ್ಥೆಯಿಂದ ಇಂದಿನಿಂದಲೇ ಹೆಜ್ಜೆ ಇಡುತ್ತೇವೆ. ಇದು ಸಂಸ್ಥೆಯಲ್ಲಿ ಸಾಧ್ಯವಾಗದಿದ್ದರೆ 2030ರ ವೇಳೆಗೆ ಸಂಸ್ಥೆಯನ್ನೇ ಬಂದ್ ಮಾಡುತ್ತೇನೆ ಎಂದರು.

ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಯ ಸಿಇಒ ಮೋಹನ ಹೆಗಡೆ ಸ್ವಾಗತಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಸಸ್ಟೇನ್ ಟೆಕ್ ಸಂಸ್ಥಾಪಕಿ ಸ್ವಾತಿ ಬೋಗ್ಲೆ, ಮಹಿಳಾ ಹೌಸಿಂಗ್ ಸೇವಾ ಟ್ರಸ್ಟ್ ನಿರ್ದೇಶಕಿ ಬಿಜಲ್ ಬ್ರಹ್ಮಭಟ್, ನಿವೃತ್ತ ಐಎಫ್​ಎಸ್ ಅಧಿಕಾರಿ ಮಧು ಬಾಧುರಿ, ರಾಜ್ಯ, ಹೊರರಾಜ್ಯಗಳ ಸೆಲ್ಕೋ ಸಂಸ್ಥೆಯ ವ್ಯವಹಾರ ಬಂಧುಗಳು ಉಪಸ್ಥಿತರಿದ್ದರು.

ಮಹಿಳೆಗೆ ತವರಿನ ಸಂಸ್ಕಾರ, ಗಂಡನ ಮನೆಯ ಸಹಕಾರ ಅಗತ್ಯ. ಆಕೆ ಮೊದಲು ಸೇವಕಿಯಾಗಿ ನಂತರ ಮಾಲೀಕನಾಗಬೇಕು. ನಾಡಿಗೆ ಅನ್ನ ಕೊಡುವವನು ರೈತನೇ ಹೊರತು ಲಕ್ಷಗಟ್ಟಲೇ ದುಡ್ಡು ಗಳಿಸುವ ನೌಕರರಲ್ಲ. ಪರಿಶ್ರಮಕ್ಕೆ ಯಶಸ್ಸು ಖಚಿತ. ಪರಿಶ್ರಮವಿದ್ದರೆ ರೈತನೂ ಕೋಟಿ ಲೆಕ್ಕದಲ್ಲಿ ಮಾತನಾಡಬಲ್ಲ. ಆದರೆ ನಮ್ಮ ಬೆಳೆಗೆ ನಾವೇ ದರ ನಿಗದಿಪಡಿಸುವ ಹಕ್ಕು ಇಲ್ಲದಿರುವುದು ದುರ್ದೈವ. | ಕವಿತಾ ಮಿಶ್ರಾ, ಪ್ರಗತಿಪರ ಕೃಷಿ ಉದ್ಯಮಿ ಅಚಾನಕ್ಕಾಗಿ ರಾಜಕೀಯಕ್ಕೆ ಬರಬೇಕಾಯಿತು. ಸರ್ಕಾರಿ ಯೋಜನೆಗಳ ಸದ್ಬಳಕೆಯಾಗುವ ತುಡಿತ ನನ್ನಲ್ಲಿತ್ತು. ಜಿಲ್ಲಾ ನವಪರಿವರ್ತನ ಯೋಜನೆಯಡಿ ಬಳಕೆಯಾಗದೆ ಇದ್ದ 7 ಕೋಟಿ ರೂ. ಅನುದಾನ ಬಳಸಿ ಇಡೀ ಶಿರಗುಪ್ಪಿಯನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸಿದೆ. ಇದರಲ್ಲಿ ಸೆಲ್ಕೋ ಸಂಸ್ಥೆಯ ಸಹಕಾರ ಮರೆಯಲಾಗದು. | ಚೈತ್ರಾ ಶಿರೂರ, ಜಿ.ಪಂ. ಮಾಜಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net