

ಸಾಗರ: ಕೇಂದ್ರ ಸರ್ಕಾರ ದೇಶದ ರೈತರ ಹಿತ ಕಾಪಾಡಲು ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಿ ಎಲ್ಲ ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭ ಸಿಗುವಂತೆ ಬೆಂಬಲ ಬೆಲೆ ಘೊಷಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಒತ್ತಾಯಿಸಿದರು.
ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಾದದ್ದು ಕೇಂದ್ರ ಸರ್ಕಾರದ ಹೊಣೆ. ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಡಾ. ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವ ಆಶ್ವಾಸನೆ ನೀಡಿತ್ತು. ಆದರೆ ಗೆದ್ದ ಬಳಿಕ ತನ್ನ ವರಸೆ ಬದಲಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವರದಿ ಜಾರಿಗೆ ತರುವ ಬದಲು ನಕಾರಾತ್ಮಕ ಹೇಳಿಕೆ ನೀಡಿ ಉತ್ಪಾದನಾ ವೆಚ್ಚದ ಮೇಲೆ ಶೇ.50 ಲಾಭ ಬರುವಂತೆ ಬೆಂಬಲ ಬೆಲೆ ನೀಡಿದರೆ ಮಾರುಕಟ್ಟೆಯ ದಿಕ್ಕು ತಪ್ಪಲಿದೆ ಎಂದು ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿರುವುದು ಖಂಡನೀಯ. ಇಂತಹ ಸಂಕಷ್ಟದಲ್ಲಿ ಸ್ವಾಮಿನಾಥನ್ ವರದಿ ಶಿಫಾರಸುಗಳನ್ನು ಜಾರಿಗೆ ತಂದರೆ ಮಾತ್ರ ರೈತರಿಗೆ ಕೃಷಿ ಆದಾಯ ಭದ್ರತೆ ದೊರೆಯಲಿದೆ ಎಂದರು.
ಕೇಂದ್ರ ಸರ್ಕಾರ ಕೇವಲ ಪೊಳ್ಳು ಹೇಳಿಕೆ ನೀಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ರೈತರ ಬಗ್ಗೆ ಇದೇರೀತಿ ನಿರ್ಲಕ್ಷ್ಯ ಮುಂದುವರಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ ಮಾತನಾಡಿ, ಈ ಹಿಂದೆ ಡಾ. ಮನಮೋಹನ್ ಸಿಂಗ್ ನರೇಗಾ ಯೋಜನೆ ಘೊಷಿಸಿದಾಗ ನರೇಂದ್ರ ಮೋದಿ ಲೇವಡಿ ಮಾಡಿದ್ದರು. ಇದೀಗ ನರೇಗಾ ಮೂಲಕವೇ ಗ್ರಾಮೀಣ ಭಾಗದ ಕೂಲಿ ಕಾರ್ವಿುಕರ ಆರ್ಥಿಕ ಭದ್ರತೆ ಸಾಧ್ಯವಾಗಿದೆ. ನರೇಗಾ ಯೋಜನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು ಎಂದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ತಾಪಂ ಸದಸ್ಯರಾದ ಜ್ಯೋತಿ, ಪ್ರಭಾವತಿ ಚಂದ್ರಕಾಂತ್, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಸುದ್ದಿಗೋಷ್ಠಿಯಲ್ಲಿದ್ದರು.