

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಯಾಸಕ್ತಿಯಿಂದ ‘ಸ್ವಾಮಿತ್ವ’ ಯೋಜನೆ ಜಾರಿಗೆ ತರಲಾಗಿದೆ. ಸಣ್ಣ ಗ್ರಾಮಗಳು ಹಾಗೂ ತಾಂಡಾಗಳ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಪಂ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಉತ್ತರ ಕರ್ನಾಟಕ ಶ್ರೀ ಸೇವಾಲಾಲ್ ಬಂಜಾರ ಹಿತವರ್ಧಕ ಸಂಘದ ವತಿಯಿಂದ ನವನಗರದಲ್ಲಿ ನಿರ್ವಿುಸಿರುವ ಧಾರವಾಡ ಜಿಲ್ಲಾ ಬಂಜಾರ ಭವನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಕೀಯರ ದಾಳಿಗಳನ್ನು ಬಂಜಾರ ಸಮಾಜ ಎದುರಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದೆ. ಇಂಥ ಸಮಾಜದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ನೀಡಲಿವೆ ಎಂದರು.
ಯೂಟ್ಯೂಬ್ನಲ್ಲಿ ಭಗವದ್ಗೀತೆ ಕುರಿತು ಉಪನ್ಯಾಸ ಮಾಲಿಕೆ ಬರುತ್ತಿದೆ. ರಾಮಾಯಣ-ಮಹಾಭಾರತದ ಕತೆಗಳನ್ನು ಬಂಜಾರ ಸಮಾಜದ ಜನರಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಅವರ ನೇತೃತ್ವದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕೆಲಸ ಚುರುಕುಗೊಂಡಿದೆ. ಅಕ್ಟೋಬರ್ 10ರೊಳಗೆ ಕಲಬುರ್ಗಿ ಜಿಲ್ಲೆಯ 242 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಹಂತ ಹಂತವಾಗಿ ರಾಜ್ಯದ ಇತರ ತಾಂಡಾಗಳಿಗೂ ವಿಸ್ತರಿಸಲಾಗುವುದು. ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಿಂದಲೂ ಸಹಕಾರ ಸಿಕ್ಕಿದೆ ಎಂದರು.
ಸರ್ಕಾರದ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರದ ಧನದ ಚೆಕ್ ವಿತರಿಸಲಾಯಿತು.
ಶ್ರೀ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಹಾಪೌರ ಈರೇಶ ಅಂಚಟಗೇರಿ, ಸದಸ್ಯರಾದ ಸುನೀತಾ ಮಾಳವದಕರ, ಚಂದ್ರಶೇಖರ ಮನಗುಂಡಿ, ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಉತ್ತರ ಕರ್ನಾಟಕ ಶ್ರೀ ಸೇವಾಲಾಲ್ ಬಂಜಾರ ಹಿತವರ್ಧಕ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ಬಸವರಾಜ ನಾಯ್ಕ, ಡಾ. ಹರಿಲಾಲ ಪವಾರ್, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು. ಚಂದ್ರನಾಯ್ಕ, ಇತರರು ಇದ್ದರು.