ಸ್ವಾಮಿ ವಿವೇಕಾನಂದರು ಶ್ರೇಷ್ಠ ದಾರ್ಶನಿಕ: ಡಿಸಿ.ಸಿ.ಸತ್ಯಭಾಮಾ

ಸ್ವಾಮಿ ವಿವೇಕಾನಂದರು ಶ್ರೇಷ್ಠ ದಾರ್ಶನಿಕ: ಡಿಸಿ.ಸಿ.ಸತ್ಯಭಾಮಾ
Published on

ಹಾಸನ: ಭಾರತೀಯ ಸಾಂಸ್ಕೃತಿಕ ಪರಂಪರೆ ಹಾಗು ಭವ್ಯತೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಶ್ರೇಷ್ಠ ದಾರ್ಶನಿಕ ಆಗಿದ್ದ ಅವರು ಮನುಕುಲದ ಉನ್ನತಿಗೆ ತಮ್ಮದೇಯಾದ ಸೇವೆ ಸಲ್ಲಿಸಿದ್ದಾರೆಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ತಿಳಿಸಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, 1893ರಲ್ಲಿ ಚಿಕಾಗೋದಲ್ಲಿ ಅವರು ಮಾಡಿದ ಭಾಷಣ ಇತಿಹಾಸ ಸೃಷ್ಟಿಸಿದೆ. ಜಗತ್ತಿಗೆ ಭ್ರಾತೃತ್ವದ ಮಹತ್ವ ತಿಳಿಸಿದರು. ಯುವ ಜನಾಂಗದ ಶಕ್ತಿಯ ಬಗ್ಗೆ ಪ್ರೇರಣಾ ಪೂರ್ವಕ ಅರಿವು ಮೂಡಿಸಿದ್ದಾರೆ. ಅವರ ಕರೆಯಂತೆ ಸತತ ಪರಿಶ್ರಮದಿಂದ ಗುರಿ ಮುಟ್ಟಲು ಯುವಕರು ಶ್ರಮಿಸಬೇಕು ಎಂದರು.
ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಸ್ವಾಮಿ ವಿವೇಕಾನಂದರು. ಅಲ್ಲಿಯವರೆಗೆ ಭಾರತವನ್ನು ಹೀನಾಯವಾಗಿ ನೋಡುವ ಪರಿಸ್ಥಿತಿ ಇತ್ತು. ಆದರೆ ವಿವೇಕಾನಂದರ ವಿದ್ವತ್ತು ಎಲ್ಲರ ತಲೆಕೆಳಗಾಗುವಂತೆ ಮಾಡಿತು. ಸ್ವಾಮಿ ವಿವೇಕಾನಂದರು ಯುವ ಜನರಿಗೆ ಸ್ಫೂರ್ತಿಯ ಸಂಕೇತ, ಭಾರತವನ್ನು ಹೊರ ದೇಶಗಳಿಗೆ ಪರಿಚಯಿಸಿದ ಸಾಂಸ್ಕೃತಿಕ ರಾಯಭಾರಿ. ಎಲ್ಲಾ ಧರ್ಮಗಳ ಉಳಿವಿಗಾಗಿ ಹೋರಾಟ ಮಾಡಿದ ಸಂತ ಎಂದು ಸ್ಮರಿಸಿದರು.
ಧರ್ಮ ಎಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದರ್ಥವಲ್ಲ. ವಿವೇಕಾನಂದರ ಪ್ರಕಾರ ಧರ್ಮ ಎಂದರೆ, ವೃತ್ತಿ, ಸಬಲೀಕರಣ, ಕಾಯಕ. ವಿವೇಕಾನಂದರ ಮಾತಿನಂತೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತು ಇಂದಿಗೂ ಜೀವಂತವಾಗಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿಗೆ ಗುರಿ ಇರಬೇಕು, ಪ್ರತಿನಿತ್ಯ ನನ್ನ ಕರ್ತವ್ಯ ಏನು, ಅದಕ್ಕೆ ಪೂರಕವಾಗಿ ಏನು ಮಾಡಿದ್ದೇನೆ. ನನ್ನ ಗುರಿಗಾಗಿ ಎಷ್ಟು ಶ್ರಮವಹಿಸುತ್ತೇವೆ ಎಂಬುದು ಮುಖ್ಯ ಎಂದು ಸಲಹೆ ನೀಡಿದರು.
ವಿವೇಕಾನಂದರ ಕರೆಯಂತೆ ಸತತ ಪರಿಶ್ರಮದಿಂದ ಗುರಿ ಮುಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗೋಣ ಎಂದ ಅವರು, ಹೊಗಳಿಕೆಯ ಮಾತಿಗೆ ಎಂದಿಗೂ ಕಿವಿಗೊಡಬೇಡಿ ಎಂದು ಕಿವಿಮಾತು ಹೇಳಿದರು.
ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಅವರು ಮಾತನಾಡಿ, ರಾಷ್ಟ್ರೀಯ ಯುವ ಸಪ್ತಾಹ ದಿನದ ಅಂಗವಾಗಿ ಜ.13 ರಂದು ಸಾಂಸ್ಕೃತಿಕ ದಿನವನ್ನು ಬೇಲೂರಿನಲ್ಲಿ ನಡೆಸಲಾಗುವುದು. 14 ರಂದು ಸಹಭಾಗಿತ್ವ-ಸಾಮಾಜಿಕ ಸೇವೆ ದಿನವನ್ನು ಹಾಸನದಲ್ಲಿ, ದೈಹಿಕ ಸಾಮರ್ಥ್ಯ ದಿನವನ್ನು ಆಲೂರು, ಶಾಂತಿಗಾಗಿ ಯುವಜನ ಕಾರ್ಯಕ್ರಮವನ್ನು ಸಕಲೇಶಪುರ, ಕೌಶಲ್ಯಾಭಿವೃದ್ಧಿ ದಿನವನ್ನು ಹೊಳೆನರಸೀಪುರ, ಜಾಗೃತಿ ದಿನವನ್ನು ಅರಕಲಗೂಡಿನಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಸ್ವಾತಂತ್ರೃ ಹೋರಾಟಗಾರ ಎಚ್.ಎಂ.ಶಿವಣ್ಣ, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ವಾರ್ತಾಧಿಕಾರಿ ಮೀನಾಕ್ಷಮ್ಮ, ಕಲಾವಿದರಾದ ಬಿ.ಟಿ.ಮಾನವ, ನೀಲಾ ಇದ್ದರು. ಎಸ್‌ಡಿಎಂ ಕಾಲೇಜು ಉಪ ಪ್ರಾಂಶುಪಾಲ ಶೈಲಜಾ ಪ್ರಸನ್ನ ಸ್ವಾಗತಿಸಿದರು. ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net