

ಮೈಸೂರು: ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಫೂರ್ತಿಯಾಗಿದ್ದರು. ಆದ್ದರಿಂದ ಪ್ರತಿಯೊಬ್ಬ ಯುವಕರು ಅವರ ತತ್ವ, ಆದರ್ಶ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಬಿ.ಜಿ.ದಿನೇಶ್ ಹೇಳಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ರಾಷ್ಟ್ರೀಯ ಯುವದಿನ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಜ್ಞಾನಿಯಾಗಿದ್ದ ವಿವೇಕಾನಂದರು ಯುವ ಜನರಿಗೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಸಂದೇಶ ನೀಡಿದರು. ವಿವೇಕಾನಂದರು ತತ್ವ ಜ್ಞಾನವನಲ್ಲದೆ ಎಲ್ಲ ವಿಚಾರಗಳನ್ನು ತಿಳಿದವರಾಗಿದ್ದರು. ನಮ್ಮ ದೇಶದ ಬಗ್ಗೆ, ಬೇರೆ ದೇಶಗಳು ಹೆಮ್ಮೆ ಪಡುವಂತೆ ಮಾಡಿದರು. ಆದ್ದರಿಂದ ನಾವು ನಮ್ಮ ನಮ್ಮ ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಕೇಂದ್ರೀಕರಿಸಿ ಏಕಾಗ್ರತೆಯಿಂದ ಕೆಲಸ ಮಾಡಿದರೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್, ಡಾ.ಜಯರೇವಣ್ಣ, ಯೋಗ ತರಬೇತುದಾರರಾದ ಶ್ರಿಶೈಲ ಕುಂಬಾರ್, ದೇವರಾಜ್, ರಾವಣೀಕರ್, ಲಾವಣ್ಯಾ, ಅಮ್ಮಾ ರಾಮಚಂದ್ರ ಇತರರು ಇದ್ದರು. ಯೋಗ ಪಟುಗಳು ಯೋಗಾಸನ ಪ್ರದರ್ಶಿಸಿದರು.