

ಚಿತ್ರದುರ್ಗ: ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯುವಸಮೂಹದ ಶ್ರಮ, ಸಮಯ ತುಂಬಾ ಅಗತ್ಯ ಎಂಬ ಅರಿವನ್ನು ಮೂಡಿಸಲು ದೇಶಾದ್ಯಂತ ಯಾತ್ರೆ ಕೈಗೊಂಡ ಸ್ವಾಮಿ ವಿವೇಕಾನಂದರು ಜಾಗೃತಿಯ ಹರಿಕಾರ ಎಂದು ಆರ್‌ಎಸ್‌ಎಸ್‌ನ ಜಿಲ್ಲಾ ಸಂಚಾಲಕ ಜಾ.ರ.ನಾಗೇಶ್ ಬಣ್ಣಿಸಿದರು.
ಜಿಲ್ಲಾ ಯೋಗಾಸನ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರು ಹೇಗಿರಬೇಕೆಂಬುದಕ್ಕೆ ವಿವೇಕಾನಂದರು ಮಾದರಿ. ದಿಟ್ಟತನದಿಂದಾಗಿ ತನ್ನ ಗುರು ರಾಮಕೃಷ್ಣರನ್ನೇ ಪ್ರಶ್ನಿಸುವ ಮೂಲಕ ನೆಚ್ಚಿನ ಶಿಷ್ಯರಾಗಿದ್ದರು. ಆಧ್ಯಾತ್ಮಿಕ ಹಂಬಲದಿಂದ ದೇಹದ ಹಸಿವನ್ನೂ ಮರೆತು ಧ್ಯಾನಸಕ್ತರಾಗುವ ಶಕ್ತಿ ಹೊಂದಿದ್ದರು. ಹೀಗಾಗಿ ಮಹೋನ್ನತ ಶಿಖರ ತಲುಪಿ, ಧೀರ ಸನ್ಯಾಸಿಯಾದರು ಎಂದು ಸ್ಮರಿಸಿದರು.
ದೇಶ ಎಲ್ಲ ರೀತಿಯಲ್ಲೂ ಬಲಿಷ್ಠವಾಗಬೇಕೆಂಬ ಸದುದ್ದೇಶದಿಂದ ಜೀವನ ಮುಡಿಪಿಟ್ಟು ವಿಶ್ವ ಪರ್ಯಟನೆ ಕೈಗೊಂಡರು. ವಾಕ್ ಚಾತುರ್ಯದ ಮೂಲಕ ಇಲ್ಲಿನ ಕೀರ್ತಿ ಹೆಚ್ಚಿಸಿದರು. ಸ್ವಾತಂತ್ರ್ಯ ಚಳವಳಿಗೆ ತಿಲಕರಿಗೆ ಪ್ರೇರಣೆ ನೀಡಿದರು. ಯುವಸಮೂಹ ನಿರುತ್ಸಾಹಿಗಳಾಗದೆ, ಸದಾ ಕ್ರಿಯಾಶೀಲರಾದರೆ ವಿವೇಕಾನಂದರ ಚಿಂತನೆಯಂತೆ ಭಾರತ ವಿಶ್ವ ಗುರು ಆಗುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಎಲ್.ಎಸ್.ಚಿನ್ಮಯಾನಂದ ಮಾತನಾಡಿ, ಸ್ವಾಮಿ ವಿವೇಕಾನಂದರು ರಾಷ್ಟ್ರ ಪ್ರೇಮದ ಪ್ರತೀಕ. ಅಲ್ಲದೆ, ಆಧ್ಯಾತ್ಮದ ಮೇರುಪರ್ವತವಾಗಿದ್ದು, ಧ್ಯಾನ ಮತ್ತು ಯೋಗ ವಿಶ್ವ ಮಾನ್ಯತೆ ಗಳಿಸಿದೆ. ಅವರು ನಮ್ಮ ಯುವಸಮೂಹಕ್ಕೆ ಬಳುವಳಿ. ಹೀಗಾಗಿ ದೇಶಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಮಹನೀಯರ ತತ್ವಾದರ್ಶ ಅಳವಡಿಸಿಕೊಂಡು ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.
ಇದೇ ವೇಳೆ ದಾರದಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ನೈಪುಣ್ಯತೆಯಿಂದ ನಿರ್ಮಿಸಿದ ಯೋಗ ವಿದ್ಯಾರ್ಥಿನಿ ಅಂಜಲಿ ಉದಿತ್, ಚಿನ್ಮಯಾನಂದ ಅವರಿಗೆ ಗುರು ಕಾಣಿಕೆಯಾಗಿ ನೀಡಿದರು.
ವೈದ್ಯರಾದ ಡಾ. ಬಸವರಾಜ, ಡಾ. ನವೀನ್ ಸಜ್ಜನ್, ಯೋಗ ತರಬೇತುದಾರರಾದ ಮುರಳಿ, ಪರಶುರಾಮ್, ವಿಶ್ವನಾಥ್, ಶಂಭುಲಿಂಗಪ್ಪ, ಶಾರದಮ್ಮ, ಸೂರಯ್ಯ, ರುಕ್ಮಿಣಿ, ಎಂ.ಜೆ.ಕೋಕಿಲಾ, ರೋಟರಿಯ ವೀರಭದ್ರಸ್ವಾಮಿ, ಶಿಕ್ಷಕಿ ವಿಮಲಾಕ್ಷಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ಇತರರಿದ್ದರು.